ಕರ್ನಾಟಕ

ಮುಂಗಡ ಪತ್ರಕ್ಕೆ ಜನರ ನಿರೀಕ್ಷೆ – ಪರೀಕ್ಷೆ : ಸಿದ್ದು 11ನೆಯ ಬಜೆಟ್

Pinterest LinkedIn Tumblr

siddu

ಬೆಂಗಳೂರು, ಮಾ. ೧೬- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಡಿದ್ದು (ಮಾ.18) ವಿಧಾನಸಭೆಯಲ್ಲಿ ಮಂಡಿಸಲಿರುವ 2016-17 ನೇ ಸಾಲಿನ ಬಜೆಟ್ ಕುರಿತಂತೆ ರಾಜ್ಯದ ಜನರಲ್ಲಿ ಹತ್ತು ಹಲವು ನಿರೀಕ್ಷೆಗಳಿದ್ದು, ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ರೂಪ ನೀಡುವಲ್ಲಿ ಮಗ್ನರಾಗಿದ್ದಾರೆ.
ಹಣಕಾಸು ಖಾತೆ ಹೊಂದಿರುವ ಸಿದ್ಧರಾಮಯ್ಯ ಅವರು ಮಂಡಿಸುತ್ತಿರುವ 11ನೇ ಬಜೆಟ್ ಇದಾಗಿದ್ದು, ಈ ಬಾರಿ ಜನಪರ ಯೋಜನೆಗಳನ್ನು ಪ್ರಕಟಿಸುವ ಬದಲು ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಮೂಲಕ ರೈತರಲ್ಲಿ ಹೊಸ ಚೈತನ್ಯ ಮೂಡಿಸಲು ಒತ್ತು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಮುಖ್ಯಮಂತ್ರಿ ಆದ ಕೂಡಲೇ ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ ಮುಂತಾದ ಭಾಗ್ಯಗಳನ್ನು ಕರುಣಿಸಿದ ಸಿದ್ದರಾಮಯ್ಯ ಅವರು ಈ ಬಾರಿ ಅಂತಹ ಘೋಷಣೆಗಳಿಗೆ ಒಲವು ತೋರುತ್ತಿಲ್ಲ ಎಂದೇ ಭಾವಿಸಲಾಗಿದೆ.
2018ರ ವಿಧಾನಸಭಾ ಚುನಾವಣೆವರೆಗೂ ಮಹತ್ವವಾದ ಯಾವುದೇ ಚುನಾವಣೆಗಳು ಎದುರಾಗದೆ ಇರುವ ಕಾರಣ ಜನರಲ್ಲಿ ಆಸೆ ಆಮಿಷಗಳನ್ನು ಒಡ್ಡುವ ಕಸರತ್ತಿಗೆ ಕೈ ಹಾಕದೆ ಗ್ರಾಮೀಣ ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ಸೃಷ್ಟಿಗೆ ಆದ್ಯ ಗಮನ ನೀಡಲಿದ್ದಾರೆ.
ಸತತ ಬರಗಾಲ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಸೇರಿದಂತೆ ಜನಸಾಮಾನ್ಯರ ಬದುಕು ಹಸನು ಮಾಡಲು ರಚನಾತ್ಮಕ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಆದ್ಯತೆ, ಬಯಲು ಸೀಮೆಗೆ ಕುಡಿಯುವ ನೀರು ಒದಗಿಸುವುದು, ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಸೇರಿದಂತೆ ಆದ್ಯತಾ ವಲಯಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ.
ಹಣಕಾಸು ಸಚಿವರಾಗಿ ಅಪಾರ ಅನುಭವ ಹೊಂದಿರುವ ಸಿದ್ಧರಾಮಯ್ಯ ಅವರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮತ್ತು ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ಉದಾರವಾಗಿ ಅನುದಾನ ಬಿಡುಗಡೆ ಮಾಡಲಿದ್ದು, ಶ್ರಮಿಕ ಶಕ್ತಿಗೆ ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ.
ಶಿಕ್ಷಣ, ಆರೋಗ್ಯ, ವಿದ್ಯುತ್ ಮುಂತಾದ ವಲಯಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ಗೆ ಅಂತಿಮ ರೂಪ ನೀಡುವ ಕೆಲಸ ನಡೆಯುತ್ತಿದೆ.
ನಾಳೆ ಸಚಿವ ಸಂಪುಟದ ಸಭೆ ನಡೆಯಲಿದ್ದು, ಬಜೆಟ್‌ಗೆ ಅಂತಿಮ ಸ್ವರೂಪ ನೀಡುವ ಕುರಿತಂತೆ ಚರ್ಚೆ ನಡೆಯಲಿದೆ.
ನಾಡಿದ್ದು ಬೆಳಗ್ಗೆ ಮಂತ್ರಿ ಪರಿಷತ್ ಸಭೆ ನಡೆಯಲಿದ್ದು, ಔಪಚೋರಿಕವಾಗಿ ಬಜೆಟ್‌ಗೆ ಅನುಮೋದನೆ ಪಡೆಯಲಿದ್ದಾರೆ. ಅದಾದ ಬಳಿಕ ಬೆಳಗ್ಗೆ 11.30 ಕ್ಕೆ ಸಿದ್ಧರಾಮಯ್ಯನವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಕಳೆದ ಎರಡು ವಾರಗಳಿಂದ ಸತತವಾಗಿ ಸಿದ್ಧರಾಮಯ್ಯ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಇಂದು ಕೂಡಾ ಬಜೆಟ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ, ವಿಧಾನಪರಿಷತ್, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಸರ್ಕಾರದ ಪರ ವ್ಯಕ್ತವಾಗಿರುವ ಜನಾಭಿಪ್ರಾಯ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತಹ ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಜನ ಬೆಂಬಲಗಳಿಸುವ ನಿಟ್ಟಿನಲ್ಲಿ ಬಜೆಟ್ ಸಿದ್ಧಗೊಳ್ಳುತ್ತಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

Write A Comment