ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ವಿರುದ್ಧ ಭಾರತದ ವನಿತೆಯರು ಜಯಗಳಿಸಿದ್ದಾರೆ.
ನಾಯಕಿ ಮಿಥಾಲಿ ರಾಜ್ ಸ್ಫೋಟಕ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ಸಹಾಯದಿಂದ ಭಾರತದ ವನಿತೆಯರು ಬಾಂಗ್ಲಾದೇಶದ ಎದುರಿನ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲಿ 72 ರನ್‌ಗಳ ಅಂತರದ ಭರ್ಜರಿ ಜಯಬೇರಿ ಬಾರಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ವನಿತೆಯರಿಗೆ, ನಾಯಕಿ ಮಿಥಾಲಿ ರಾಜ್(42) ಹಾಗೂ ವನಿತಾ(38) ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 62 ರನ್‌ಗಳ ಗೌರವಾರ್ಹ ಜತೆಯಾಟ ನೀಡಿತು. ಆದರೆ ವನಿತಾ ಬಾಂಗ್ಲಾದೇಶದ ನಹಿದಾ ಅಖ್ತರ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ, ಮೂರನೇ ಕ್ರಮಾಂದಲ್ಲಿ ಆಗಮಿಸಿದ ಸ್ಮತಿ ಮಂದನಾ(0) ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಅಂಗಳಕ್ಕಿಳಿದ ಆಲ್‌ರೌಂಡರ್ ಹರ್ಮಿತ್ ಕೌರ್(40) ನಾಯಕಿ ಮಿಥಾಲಿ ರಾಜ್‌ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 38 ರನ್‌ಗಳ ಉತ್ತಮ ಜತೆಯಾಟ ನೀಡಿತು. ಈ ಸಂದರ್ಭದಲ್ಲಿ ದಾಳಿಗಿಳಿದ ರುಮಾನಾ ಅಹಮದ್ ಮಿಥಾಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ನಂತರ ಹರ್ಮಿತ್ ಕೌರ್ , ವೇದ ಕೃಷ್ಣಮೂರ್ತಿ ಜತೆಗೂಡಿ ಇನ್ನಿಂಗ್ಸ್ ಕಟ್ಟಲು ಮುಂದಾದರು.
ಸ್ಫೋಟಕ ಆಟಕ್ಕೆ ಮುಂದಾದ ಈ ಜೋಡಿ ಕೇವಲ 4 ಓವರ್‌ಗಳಲ್ಲಿ 41 ರನ್ ಕಲೆಹಾಕಿತು. ನಾಲ್ಕನೇ ವಿಕೆಟ್ ರೂಪದಲ್ಲಿ ಕೌರ್ ಔಟಾಗುವುದಕ್ಕೂ ಮುಂಚೆ ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಕೌರ್ ವಿಕೆಟ್ ಪತನದ ನಂತರ ವೇದಾ ಇಡೀ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡವರಂತೆ ಬ್ಯಾಟ್ ಬೀಸಿದರು. ಕೇವಲ 24 ಎಸೆತಗಳನ್ನು ಎದುರಿಸಿದ ವೇದಾ 2 ಆಕರ್ಷಕ ಸಿಕ್ಸರ್ ಸಹಿತ 36 ರನ್ ದಾಖಲಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್‌ಗಳಿಗೆ 163 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಬಾಂಗ್ಲಾ ಕಳಪೆ ಆಟ :
ಭಾರತದ ವನಿತೆಯರು ಸ್ಕೋರ್‌ಬೋರ್ಡ್‌ನಲ್ಲಿ ದಾಖಲಿಸಿದ್ದ ಬೃಹತ್ ಮೊತ್ತಕ್ಕೆ ಆರಂಭದಲ್ಲೇ ನಿಟ್ಟುಸಿರು ಬಿಟ್ಟಿದ್ದ ಬಾಂಗ್ಲಾ ವನಿತೆಯರು ಇಡೀ ಇನ್ನಿಂಗ್ಸ್ ನ ಯಾವ ಹಂತದಲ್ಲೂ ಭಾರತೀಯರಿಗೆ ತಿರುಗಿಬೀಳುವ ಆಟ ಆಡಿಲ್ಲ.
ಮಹತ್ವದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬಾಂಗ್ಲಾದೇಶದ ಶರ್ಮಿನ್ ಅಖ್ತರ್(21) ಕೊಂಚ ಹೋರಾಟ ತೋರಿದರಾದರೂ, ಆಯಷಾ ರಹಮಾನ್(4) ಹಾಗೂ ಮೂರನೇ ಕ್ರಮಾಂಕದ ಆಟಗಾರ್ತಿ ಸಂಜಿದಾ ಇಸ್ಲಾಮ್(2) ಅಲ್ಪ ಮೊತ್ತಕ್ಕೆ ಹೊರನಡೆಯುವ ಮೂಲಕ ಬಾಂಗ್ಲಾ ಆರಂಭದಲ್ಲೇ ಗೆಲವಿನ ಆಸೆ ಕೈಚೆಲ್ಲಿತು.
ಮಧ್ಯಮ ಕ್ರಮಾಂಕದಲ್ಲಿ ನಿಗಾರ್ ಸುಲ್ತಾನ (ಅಜೇಯ 27) ಹೊರತುಪಡಿಸಿ ಉಳಿದ ಆಟಗಾರ್ತಿಯರಿಂದ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ ಕೇವಲ 91 ರನ್‌ಗಳಿಸುವ ಮೂಲಕ 72 ರನ್‌ಗಳ ಸೋಲನುಭವಿಸಿತು. ಭಾರತದ ಪರ ಮಿಂಚಿನ ದಾಳಿ ನಡೆಸಿದ ಅನುಜಾ ಪಾಟೀಲ್ ಹಾಗೂ ಪೂನಮ್ ಯಾದವ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.