ಕರ್ನಾಟಕ

ಇನ್ನು ಪೋಲಿಯೋ ಲಸಿಕೆ ಜತೆ ಇಂಜೆಕ್ಷನ್ನೂ ಹಾಕಿಸಬೇಕು!

Pinterest LinkedIn Tumblr

poliyoಬೆಂಗಳೂರು: ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವ ಉದ್ದೇಶದಿಂದ ಈಗಾಗಲೇ ಜಾರಿಯಲ್ಲಿರುವ ಲಸಿಕಾ ಕಾರ್ಯಕ್ರಮದ ಜತೆಗೆ ಲಸಿಕಾ ಚುಚ್ಚು ಮದ್ದು ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.

ನವಜಾತ ಶಿಶುಗಳಿಗೆ ಲಸಿಕಾ ಚುಚ್ಚು ಮದ್ದು ನೀಡುವ ನೂತನ ಕಾರ್ಯಕ್ರಮವು ರಾಜ್ಯದಲ್ಲಿ ಬರುವ ಏಪ್ರಿಲ್‌ ತಿಂಗಳಿನಿಂದ ಜಾರಿಗೆ ಬರಲಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಮುಂದಿನ 5-6 ವರ್ಷಗಳ ನಂತರ ಹಂತ ಹಂತವಾಗಿ ಬಾಯಲ್ಲಿ ಹಾಕುವ ಲಸಿಕಾ ಪದ್ಧತಿಯನ್ನು ಸ್ಥಗಿತಗೊಳಿಸಿ ಚುಚ್ಚುಮದ್ದು ಮೂಲಕ ಲಸಿಕೆ ನೀಡುವ ಪದ್ಧತಿಯನ್ನೇ ಮುಂದುವರಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಈ ಲಸಿಕಾ ಚುಚ್ಚು ಮದ್ದು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಮಗು ಜನಿಸಿದ ಒಂದೂವರೆ ತಿಂಗಳಿಗೊಮ್ಮೆ ಮತ್ತು ಮೂರುವರೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಏಪ್ರಿಲ್‌ ತಿಂಗಳಿನಿಂದ ಜಾರಿಯಾಗುವ ಚುಚ್ಚುಮದ್ದು ಲಸಿಕಾ ಪದ್ಧತಿ ಜತೆಗೆ ಬಾಯಲ್ಲಿ ಹಾಕುವ ಲಸಿಕಾ ಪದ್ಧತಿಯನ್ನು ಮುಂದುವರಿಸಲಾಗುವುದು. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎನ್ನುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ವರ್ಷಕ್ಕೆ ಎರಡು ಬಾರಿ ಬಾಯಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೂ ಒಂದು ಕೋಟಿ ಮಕ್ಕಳಲ್ಲಿ ಒಬ್ಬರಿಗೆ ಪೋಲಿಯೋ ಬರುವ ಸಾಧ್ಯತೆ ಇದೆ. ಬಾಯಲ್ಲಿ ಹಾಕುವ ಲಸಿಕೆಯಲ್ಲಿ ಮಗುವಿನ ದೇಹದಲ್ಲಿನ ಜೀವಂತ ವೈರಸ್ಸನ್ನು ನಿಶ್ಶಕ್ತಿಗೊಳಿಸುವ ಸಾಮರ್ಥಯ ಇರುತ್ತದೆ. ಪ್ರಸ್ತುತ ಸಂಶೋಧಿಸಿರುವ ಚುಚ್ಚುಮದ್ದಿನಲ್ಲಿ ರೋಗಾಣುವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಶಕ್ತಿ ಇರುತ್ತದೆ. ಹೀಗಾಗಿ ಚುಚ್ಚು ಮದ್ದು ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಲಸಿಕಾ ವಿಭಾಗದ ಉಪನಿರ್ದೇಶಕ ರಾಮಚಂದ್ರ ಬೈರಿ ಹೇಳಿದ್ದಾರೆ.

ಈ ಸಂಬಂಧ ಉದಯವಾಣಿ ಜತೆ ಮಾತನಾಡಿದ ಅವರು, ಲಸಿಕಾ ಚುಚ್ಚುಮದ್ದು ಕಾರ್ಯಕ್ರಮವು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಪಂಜಾಬ್‌, ರಾಜಸ್ಥಾನ ಸೇರಿದಂತೆ ಆರು ರಾಜ್ಯಗಳಲ್ಲಿ ನವೆಂಬರ್‌ ತಿಂಗಳಲ್ಲಿ ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕ ಸೇರಿದಂತೆ ದೇಶದ ಇನ್ನುಳಿದ ರಾಜ್ಯಗಳಲ್ಲಿ ಏಪ್ರಿಲ್‌ ತಿಂಗಳಿನಿಂದ ಜಾರಿಗೊಳ್ಳಲಿದೆ. ದೇಶದಲ್ಲಿ ಮಾತ್ರವಲ್ಲದೇ 156 ರಾಷ್ಟ್ರಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗುತ್ತಿದೆ ಎಂದು ವಿವರಿಸಿದರು.

ಮಕ್ಕಳಿಗೆ ಉಚಿತವಾಗಿ ಚುಚ್ಚುಮದ್ದು ನೀಡಲಾಗುವುದು. ಆದರೆ, ಸರ್ಕಾರಕ್ಕೆ ಇದನ್ನು ಖರೀದಿಸಲು ಪ್ರತಿ ಚುಚ್ಚುಮದ್ದಿಗೆ 120 ರೂ.ನಂತೆ ವೆಚ್ಚವಾಗುತ್ತದೆ. ಈಗಾಗಲೇ ಅಗತ್ಯ ಚುಚ್ಚುಮದ್ದುಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ದೇಶದಲ್ಲಿಯೇ ಈ ಚುಚ್ಚುಮದ್ದು ಸಿದ್ಧಗೊಳ್ಳುತ್ತಿದ್ದು, ವಿದೇಶಗಳಿಗೆ ನಮ್ಮ ದೇಶದಿಂದ ರಫ್ತಾಗಲಿದೆ ಎಂದರು.

ಪೋಲಿಯೋದಲ್ಲಿ ಮೂರು ರೀತಿಯ ಉಪಜಾತಿಗಳಿವೆ. ಇವುಗಳನ್ನು ವೈದ್ಯಕೀಯ ಕ್ಷೇತ್ರವು ಪಿ-1, ಪಿ-2 ಮತ್ತು ಪಿ-3 ಎಂದು ವಿಂಗಡಿಸಿದೆ. ಈ ಮೂರು ಉಪಜಾತಿಗಳ ಪೈಕಿ ಪಿ-2, 1999ನೇ ಇಸವಿಯಲ್ಲಿ ಸ್ಥಗಿತಗೊಂಡಿದೆ. ಪಿ-1 ಮತ್ತು ಪಿ-3 ಮಾತ್ರ ವಿಶ್ವದಲ್ಲಿದೆ. 2011ನೇ ಸಾಲಿನಿಂದ ಪೋಲಿಯೋ ಕಾಣಿಸಿಕೊಂಡಿಲ್ಲ. ಆದರೆ, ನೆರೆ ರಾಷ್ಟ್ರ ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಕಾಣಿಸಿಕೊಳ್ಳುತ್ತಿರುವ ಕಾರಣ ನಮ್ಮ ದೇಶದಲ್ಲಿ ಪೋಲಿಯೋಗಾಗಿ ಲಸಿಕೆ ನೀಡಲಾಗುತ್ತಿದೆ. ಆ ರಾಷ್ಟ್ರವು ಶೂನ್ಯಕ್ಕೆ ತಲುಪುವವರೆಗೆ ನಮ್ಮ ರಾಷ್ಟ್ರದಲ್ಲಿ ಲಸಿಕಾ ಕಾರ್ಯಕ್ರಮ ನಿಲ್ಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಹೀಗಾಗಿ ಲಸಿಕಾ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದರು.

ನವಜಾತ ಶಿಶುಗಳ ಆರೋಗ್ಯ ದೃಷ್ಟಿಯಿಂದ ಚುಚ್ಚುಮದ್ದು ಲಸಿಕಾ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಪೋಲಿಯೋ ಮುಕ್ತ ಭಾರತ ಮತ್ತು ಕರ್ನಾಟಕ ಮಾಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಮುಂದಿನ ಹಂತವಾಗಿ ಪೋಲಿಯೋ ಮುಕ್ತವಾಗಿ ಮುಂದುವರಿಯುವುದು ಹೇಗೆಂಬ ಬಗ್ಗೆ ಮಾರ್ಗಸೂಚಿ ಇದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
-ಯು.ಟಿ.ಖಾದರ್‌, ಆರೋಗ್ಯ ಸಚಿವ

ಪ್ರಭುಸ್ವಾಮಿ ನಟೇಕರ್‌

-ಉದಯವಾಣಿ

Write A Comment