ಕರ್ನಾಟಕ

ಐಎಎಸ್ ಅಧಿಕಾರಿ ಡಿ.ಕೆ ರವಿ ವರ್ಷದ ತಿಥಿಗಾಗಿ ಚಿನ್ನದಸರ ಅಡವಿಟ್ಟ ತಾಯಿ

Pinterest LinkedIn Tumblr

D.K Ravi

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಮೃತಪಟ್ಟು ಮಾರ್ಚ್ 16 ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟೂರು ಕುಣಿಗಲ್ ನ ದೊಡ್ಡಕೊಪ್ಪಲಿನಲ್ಲಿ ರವಿ ಅವರ ವರ್ಷದ ಪುಣ್ಯತಿಥಿ ಹಮ್ಮಿಕೊಳ್ಳಲಾಗಿದೆ.

ಸಂಪ್ರದಾಯದಂತೆ ವರ್ಷ ತುಂಬುವ ಮೂರು ದಿನ ಮೊದಲೇ ಪುಣ್ಯ ತಿಥಿ ಮಾಡಬೇಕಿದೆ. ವಿಪರ್ಯಾಸವೆಂದರೇ ರವಿ ಅವರ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ತಿಥಿಕಾರ್ಯಕ್ಕಾಗಿ ರವಿ ಅವರ ತಾಯಿ ತಮ್ಮ ಕೊರಳಿನ ಚಿನ್ನದ ಸರವನ್ನು ಅಡವಿಟ್ಟಿದ್ದಾರೆ.

ಡಿ.ಕೆ ರವಿ ಅವರು ಮೃತಪಟ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡಿದ್ದ ಯಾವೊಂದು ಭರವಸೆಗಳು ಈಡೇರಿಲ್ಲ. ಹೀಗಾಗಿ ರವಿ ಮದುವೆ ವೇಳೆ ಮಾಡಿಸಿದ್ದ ಚಿನ್ನದ ಸರವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಪುಣ್ಯ ತಿಥಿ ಕಾರ್ಯ ನಡೆಸಲಾಗುತ್ತಿದೆ.

ಮೊಮ್ಮಕ್ಕಳ ವಿದ್ಯಾಭ್ಯಾಸದ ಖರ್ಚು, ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ನನ್ನ ಮಗ ಹಣ ಸಂಪಾದಿಸಿಲ್ಲ. ಹೀಗಾಗಿ ನನ್ನ ಕೊರಳಿನ ಸರ ಅಡವಿಟ್ಟು ವರ್ಷದ ಕಾರ್ಯ ಮಾಡುತ್ತಿರುವುದಾಗಿ ರವಿ ತಾಯಿ ಹೇಳಿದ್ದಾರೆ.

ವರ್ಷ ಕಳೆದರೂ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಮಾ.16ರ ಬೆಳಗ್ಗೆ 10 ಗಂಟೆಗೆ ರವಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಹುಲಿಯೂರು ದುರ್ಗದವರೆಗೆ ಪಾದಯಾತ್ರೆ ನಡೆಸಿ, ಬೆಂಗಳೂರಿನ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಗೌರಮ್ಮ ತಿಳಿಸಿದ್ದಾರೆ.

Write A Comment