ಕರ್ನಾಟಕ

ರಾಜ್ಯ ಕಾಂಗ್ರೆಸ್ ಗೆ ಹೊಸ ನಾಯಕ: ದೆಹಲಿಗೆ ಪ್ರಮುಖ ನಾಯಕರ ದೌಡು ! ರೇಸ್ ನಲ್ಲಿ ಡಿಕೆಶಿ, ಎಸ್.ಆರ್. ಪಾಟೀಲ್ ,ಸಿ.ಎಸ್.ನಾಡಗೌಡ

Pinterest LinkedIn Tumblr

congress

ಬೆಂಗಳೂರು : ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಿಸುವ ಚರ್ಚೆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ದೆಹಲಿಗೆ ತೆರಳಿದ್ದಾರೆ.

ಡಾ. ಪರಮೇಶ್ವರ ಸಂಪುಟ ಸೇರ್ಪಡೆಯಾದ ಬಳಿಕ ಪಕ್ಷದ ಹೊಣೆಗಾರಿಕೆಯನ್ನು ಬೇರೆಯವರಿಗೆ ವಹಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಈ ಹುದ್ದೆಯಲ್ಲಿ ಅವರನ್ನು ಮುಂದುವರಿಸಲಾಗಿತ್ತು. ಇದೀಗ ಪಂಚಾಯಿತಿ ಚುನಾವಣೆಗೆ ತೆರೆ ಬಿದ್ದಿದ್ದು, ಕೆಪಿಸಿಸಿಗೆ ಹೊಸ ಸಾರಥಿಯ ಶೋಧ ಕಾರ್ಯ ಆರಂಭವಾಗಿದೆ.

ಲಿಂಗಾಯಿತರಿಗೆ ಪ್ರಾತಿನಿಧ್ಯ ನೀಡುವ ಇಚ್ಛೆ ಹೈಕಮಾಂಡ್‌ಗೂ ಇದ್ದು, ಸಚಿವ ಎಸ್.ಆರ್. ಪಾಟೀಲ್ ಹಾಗೂ ಸರಕಾರದ ದಿಲ್ಲಿ ಪ್ರತಿನಿಧಿ ಸಿ.ಎಸ್.ನಾಡಗೌಡ ಹೆಸರು ಮುಂಚೂಣಿಯಲ್ಲಿದೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರೂ ಪಕ್ಷದ ಜವಾಬ್ದಾರಿ ಹೊರಲು ಮುಕ್ತ ಮನಸ್ಸು ಹೊಂದಿದ್ದಾರೆ ಎನ್ನಲಾಗಿದೆ.

ಒಕ್ಕಲಿಗರಿಗೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ನೀಡುವುದಾದರೆ ತುಮಕೂರು ಸಂಸದ ಮುದ್ದುಹನುಮೇಗೌಡರ ಹೆಸರು ಸೂಚಿಸಲು ಗೃಹ ಸಚಿವರು ಬಯಸಿದ್ದಾರೆ. ಲಿಂಗಾಯಿತರಿಗೆ ಈ ಸ್ಥಾನ ಖಚಿತ ಎನ್ನುವುದಾದರೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೆಸರನ್ನು ಮುಂಚೂಣಿಗೆ ತಂದು ನಿಲ್ಲಿಸುವ ಉದ್ದೇಶವೂ ಪರಮೇಶ್ವರ ಅವರಿಗಿದೆ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲು ಅವರು ದಿಲ್ಲಿಗೆ ದೌಡಾಯಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನಿಯುಕ್ತಿಗೊಳಿಸುವಾಗ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಆಧರಿಸಿ ಹೈಕಮಾಂಡ್ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತದೆ. ಎಸ್.ಆರ್. ಪಾಟೀಲ್ ಮತ್ತು ನಾಡಗೌಡ ಅವರಲ್ಲಿ ಒಬ್ಬರನ್ನು ಕೆಪಿಸಿಸಿಗೆ ಅಧ್ಯಕ್ಷರ ಹುದ್ದೆಗೆ ತರಲು ಸಿಎಂ ಒಲವು ತೋರಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ ಬಳಿಕವೇ ವರಿಷ್ಠರು ಈ ವಿಚಾರದಲ್ಲಿ ಮುಂದಿನ ಹೆಜ್ಜೆ ಇಡಲಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.

Write A Comment