ಕರ್ನಾಟಕ

ರೇಷ್ಮೆ ಉತ್ಪನ್ನಗಳಿಗೆ ಸಿದ್ದರಾಮಯ್ಯ ರಾಯಭಾರಿ!

Pinterest LinkedIn Tumblr

sidduಚಿತ್ರದುರ್ಗ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಉತ್ಪನ್ನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರ್ಯಾಂಡ್ ಅಂಬಾಸಿಡರ್ ಎಂದು ನಿಗಮದ ಅಧ್ಯಕ್ಷ ಡಿ. ಬಸವರಾಜ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ನಿತ್ಯ ಧರಿಸುವ ರೇಷ್ಮೆ ಶಲ್ಯ ನಿಗಮದ ಉತ್ಪನ್ನವಾಗಿದೆ. ಇದನ್ನು ನಿತ್ಯ ಧರಿಸುವ ಸಿಎಂ ನಮ್ಮ ರಾಯಭಾರಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಗಮದ ಈ ವರ್ಷದ ವಹಿವಾಟು ಗುರಿ 160 ಕೋಟಿ ರೂ. ಆಗಿದೆ. ನಿಗಮ ಈಗಾಗಲೇ 130 ಕೋಟಿ ರೂ. ವಹಿವಾಟು ನಡೆಸಿದೆ. ಉಳಿದ 30 ಕೋಟಿ ರೂ. ವಹಿವಾಟು ಗುರಿಯನ್ನು ಈ ತಿಂಗಳಲ್ಲಿ ಸಾಧಿಸಲಾಗುವುದು ಎಂದರು.

ಕಳೆದ ಮೂರು ವರ್ಷಗಳಲ್ಲಿ ಸಂಸ್ಥೆಯಲ್ಲಿ 104ಕೋಟಿ ರೂ., 127 ಕೋಟಿ ಹಾಗೂ 146 ಕೋಟಿ ರೂ. ವಹಿವಾಟು ನಡೆದಿದ್ದು, ನಷ್ಟದಿಂದ ಲಾಭದತ್ತ ಸಾಗಿದೆ. ಹಿಂದಿನ ವರ್ಷ ರಾಜ್ಯ ಸರ್ಕಾರಕ್ಕೆ ಡಿವಿಡೆಂಡ್ ಮೊತ್ತ 1.10 ಕೋಟಿ ರೂ. ಕೊಟ್ಟಿದೆ. ಈ ವರ್ಷ ಸದ್ಯದಲ್ಲೇ ಸರ್ಕಾರಕ್ಕೆ 2.20 ಕೋಟಿ ರೂ. ಡಿವಿಡೆಂಟ್ ಮೊತ್ತವನ್ನು ಸರ್ಕಾರಕ್ಕೆ ಪಾವತಿಸುವುದಾಗಿ ಹೇಳಿದರು.

ದರ ಏರಿಳಿತ ಭರವಸೆ: ಚಿನ್ನ, ಬೆಳ್ಳಿ ದರ ಏರಿಳಿತಕ್ಕೆ ತಕ್ಕಂತೆ ಸಂಸ್ಥೆ ಉತ್ಪನ್ನಗಳ ದರ ನಿಗದಿ ಪಡಿಸುವ ಭರವಸೆ ನೀಡಿದ ಅವರು, ಸದ್ಯ 12 ಸಾವಿರ ರೂ. ಗಳಿಂದ 2.65 ಲಕ್ಷ ರೂ. ಮೌಲ್ಯದ ರೇಷ್ಮೆ ಸೀರೆ ತಯಾರಿಸುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇಂದಿರಾನಗರದಲ್ಲಿ ಮಾರಾಟ ಮಳಿಗೆ ಆರಂಭಿಸಲಾಗುತ್ತಿದೆ. ಧಾರವಾಡ, ಹುಬ್ಬಳ್ಳಿ, ತುಮಕೂರು, ಬೆಳಗಾವಿ, ಕಲಬುರಗಿ, ಚಿತ್ರದುರ್ಗದಲ್ಲಿ ಶೀಘ್ರದಲ್ಲಿ ಮಾರಾಟ ಮಳಿಗೆ ಸ್ಥಾಪಿಸಲಾಗುವುದು ಎಂದರು.

ಮೈಸೂರಲ್ಲಿ 6, ಬೆಂಗಳೂರಲ್ಲಿ 7, ಚನ್ನಪಟ್ಟಣ, ದಾವಣಗೆರೆ, ಚೆನ್ನೈ ಮತ್ತು ಹೈದರಾಬಾದ್​ಗಳಲ್ಲಿ ತಲಾ ಒಂದು ಮಾರಾಟ ಮಳಿಗೆಗಳಿವೆ. ಸಂಸ್ಥೆ ಅಧಿಕೃತ ಷೋರೂಂ ಹೊರತುಪಡಿಸಿ ಎಲ್ಲೂ ನಿಗಮದ ಉತ್ಪನ್ನಗಳನ್ನು ಮಾರುತ್ತಿಲ್ಲ. ಮೈಸೂರು ನೇಯ್ಗೆ ಕಾರ್ಖಾನೆ, ಚನ್ನಪಟ್ಟಣದ ಜೂಟು ರೇಷ್ಮೆ, ಟಿ. ನರಸೀಪುರ ಘಟಕಗಳ ನವೀಕರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಕೆಳ ಮತ್ತು ಮಧ್ಯಮ ವರ್ಗ, ಬಡವರಿಗೆ ಕೈಗೆಟುವ ದರದಲ್ಲಿ ಮೆದು ರೇಷ್ಮೆ ಸೀರೆ, ವಸ್ತ್ರ ಉತ್ಪನ್ನ ಉದ್ದೇಶವಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ಮಾ. 9ರಿಂದ 13ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ನಿಗಮದ ಉತ್ಪನ್ನಗಳ ಮಾರಾಟ ಏರ್ಪಡಿಸಲಾಗಿದೆ. ಕಳೆದ ವರ್ಷದ ಮಾರಾಟ ವೇಳೆ 43 ಲಕ್ಷ ರೂ. ವಹಿವಾಟು ನಡೆದಿತ್ತು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ತಿಪ್ಪಣ್ಣ, ಪಿ. ರಾಜಕುಮಾರ್, ಹಾಲೇಶ್, ವಿರೇಶ್, ತಿಪ್ಪೇಸ್ವಾಮಿ ನಟರಾಜ್​ಸುದ್ದಿಗೋಷ್ಠಿಯಲ್ಲಿದ್ದರು.

104ನೇ ವರ್ಷಕ್ಕೆ ಕೆಎಸ್​ಐಸಿ ಪದಾರ್ಪಣೆ ಮಾಡಿದ್ದು, 645 ಕಾರ್ವಿುಕರಿದ್ದಾರೆ. ಇವರೊಂದಿಗೆ 254 ಹೊರಗುತ್ತಿಗೆ ಕಾರ್ವಿುಕರಿದ್ದಾರೆ. ಶೀಘ್ರ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು. ಏರ್ ಇಂಡಿಯಾ ಸಿಬ್ಬಂದಿಗೆ 8,500 ಸೀರೆ ಪೂರೈಸಿದ್ದು, ಈ ವರ್ಷ 1,500 ಸೀರೆ ಸರಬರಾಜು ಮಾಡಲಾಗುವುದು

| ಡಿ.ಬಸವರಾಜ್, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ

Write A Comment