ಬೆಂಗಳೂರು: ಮಳೆನೀರು ಸಂಗ್ರಹಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ಥಾಪಿತಗೊಂಡಿರುವ ಜಯನಗರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರದ ಬಗ್ಗೆ ಬೆಂಗಳೂರಿನ ನಿವಾಸಿಗಳಿಂದ ನಿರಾಸಕ್ತಿ ವ್ಯಕ್ತವಾಗಿರಬಹುದು. ಆದರೆ ಈ ಕೇಂದ್ರ ಇಡೀ ರಾಷ್ಟ್ರಕ್ಕೆ ಮಾದರಿ ಆಗಿರುವುದು ಸುಳ್ಳಲ್ಲ.
2011 ರಲ್ಲಿ ಸ್ಥಾಪನೆಗೊಂಡಿರುವ ಈ ಕೇಂದ್ರ ಇದೀಗ 5ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಇದರಿಂದ ಜಲಮಂಡಳಿಗೆ ಹೆಚ್ಚಿನ ಲಾಭವಾಗದೇ ಇರಬಹುದು. ಆದರೆ, ಈ ಕೇಂದ್ರದಿಂದ ಸ್ಪೂರ್ತಿಗೊಂಡ ಕೇರಳ ಹಾಗೂ ಉತ್ತರಪ್ರದೇಶ ಸರ್ಕಾರಗಳು, ತಮ್ಮಲ್ಲೂ ಇದೇ ಮಾದರಿಯ ಕೇಂದ್ರಗಳನ್ನು ನಿರ್ವಿುಸುವ ಬಗ್ಗೆ ಆಸಕ್ತಿ ತೋರಿವೆ. ಆದ್ದರಿಂದ, ಈ ಕೇಂದ್ರ ಭೇಟಿಗಾಗಿ ತಮ್ಮ ಅಧಿಕಾರಿಗಳ ನಿಯೋಗವನ್ನು ಕಳುಹಿಸಿಕೊಟ್ಟಿವೆ. ಕೇಂದ್ರಕ್ಕೆ ಭೇಟಿ ನೀಡಿದ್ದ ಉಭಯ ನಿಯೋಗಗಳು, ಸುಗ್ಗಿ ಕೇಂದ್ರದ ಬಗೆಗಿನ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡಿವೆ.
27 ಸಾವಿರ ಜನರ ಭೇಟಿ: 2011ರಲ್ಲಿ ಸ್ಥಾಪನೆಗೊಂಡಾಗಿನಿಂದ ಇದುವರೆಗೆ 27 ಸಾವಿರ ಜನರು ಸರ್ ಎಂ.ವಿಶ್ವೇಶ್ವರಯ್ಯ ಮಳೆನೀರುಸುಗ್ಗಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹಪಾಲು.
ಇಳಿಜಾರು, ಛಾವಣಿ, ಲೋಹ, ಪಿವಿಸಿ, ಬಂಬೂ, ಹಾಸು, ಗೋಡೆ ಆರೋಹಿತ, ಸಿಲ್ಟ್ ಟ್ರ್ಯಾಪ್, ಮಣ್ಣಿನ ಕುಡಿಕೆ, ಹೂಳು ಬಲೆ, ಮೇಲ್ಮೈ ಟ್ಯಾಂಕ್, ಅಂಡರ್ಗ್ರೌಂಡ್ ಸಂಪ್, ಮೆಟಲ್ ಡ್ರಮ್ ಫೈಬರ್ ಸಂಗ್ರಹ ಟ್ಯಾಂಕ್, ಫೆರೊ ಸಿಮೆಂಟ್ ಸೇರಿ 25 ಮಾದರಿಯ ಮಳೆನೀರು ಕೊಯ್ಲು ಪ್ರಾತ್ಯಕ್ಷಿಕೆಗಳು ಈ ಕೇಂದ್ರದಲ್ಲಿ ಲಭ್ಯ ಇವೆ. ಇವುಗಳನ್ನು ಬಳಸಿಕೊಂಡು, ವಿದ್ಯಾರ್ಥಿಗಳಿಗೆ ಮಳೆನೀರು ಸಂಗ್ರಹಣೆ ಕುರಿತು ಮಾಹಿತಿ ಒದಗಿಸಲಾಗುತ್ತಿದೆ.
ಪ್ರವಾಸಿತಾಣವೂ ಹೌದು: ಮಳೆನೀರು ಸಂಗ್ರಹಣೆಯ ಜಾಗೃತಿ ಉದ್ದೇಶ ಮಾತ್ರವಲ್ಲ, ಈ ಕೇಂದ್ರವನ್ನು ಪ್ರವಾಸಿತಾಣವನ್ನಾಗಿ ರೂಪಿಸಲಾಗಿದೆ. 1.1 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ವಣಗೊಂಡಿರುವ ಈ ಕೇಂದ್ರದಲ್ಲಿ ಪ್ರಶಾಂತ ವಾತಾವರಣ ಇದೆ. ಹಾಗಾಗಿ ಈ ಕೇಂದ್ರದಲ್ಲಿ ಜ್ಞಾನದ ಜತೆಗೆ ಉಲ್ಲಾಸವೂ ಮೇಳೈಸಿದೆ.
ಬೆಂಗಳೂರು ನಿವಾಸಿಗಳ ನಿರ್ಲಕ್ಷ್ಯ ಭಾರತದ ಸಿಲಿಕಾನ್ ಸಿಟಿಯಲ್ಲಿ ಮಳೆನೀರು ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೂ, ವರ್ಷದಲ್ಲಿ ಮೂರು ತಿಂಗಳು ಸುರಿವ ಮಳೆಯ ನೀರನ್ನು ಸಂಗ್ರಹಿಸುವ ವಿಷಯದಲ್ಲಿ ನಿವಾಸಿಗಳು ತೀವ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆದರೆ, ತಮ್ಮಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ಸಲುವಾಗಿ ದುಬೈ, ಆಸ್ಟ್ರೇಲಿಯಾ ಸೇರಿ ವಿಶ್ವದ ಅನೇಕ ಬೃಹತ್ ನಗರಗಳ ಜನರು, ಅಧಿಕಾರಿಗಳು ಸರ್ ಎಂ.ವಿ. ಮಳೆನೀರು ಸುಗ್ಗಿ ಕೇಂದ್ರಕ್ಕೆ ಬಂದು ತೀವ್ರ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದಾರೆ. ಇದನ್ನು ಕಂಡಾದರೂ ಬೆಂಗಳೂರು ನಿವಾಸಿಗಳು ಎಚ್ಚೆತ್ತುಕೊಂಡು, ಈ ಕೇಂದ್ರದ ಸದ್ಭಳಕೆಗೆ ಮುಂದಾಗುತ್ತಾರೆ ಎಂಬುದು ಕೇಂದ್ರದ ಅಧಿಕಾರಿಗಳ ನಿರೀಕ್ಷೆಯಾಗಿದೆ.
ಬಯಲು ರಂಗಮಂದಿರವೂ ಇದೆ: ಸರ್ ಎಂ.ವಿ. ಮಳೆನೀರು ಸುಗ್ಗಿ ಕೇಂದ್ರದಲ್ಲಿ ಬಯಲು ರಂಗಮಂದಿರವನ್ನು ಕೂಡ ನಿರ್ವಿುಸಲಾಗಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಹಾಗೂ ಕಾರ್ಯಕ್ರಮಗಳನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುತ್ತಾರೆ. ಈ ಅವಕಾಶವನ್ನು ಬಳಸಿಕೊಂಡು, ಪ್ರೇಕ್ಷಕ ವರ್ಗದವರಲ್ಲಿ ಮಳೆನೀರು ಸಂಗ್ರಹದ ಜಾಗೃತಿ ಮೂಡಿಸಲು ಕೇಂದ್ರದ ಅಧಿಕಾರಿಗಳು ಅಗತ್ಯ ಏರ್ಪಾಡುಗಳನ್ನು ಮಾಡಿದ್ದಾರೆ.
ಕಾವೇರಿಯ ‘ಓಲೈಕೆ’ ಸುಲಭವಾಗಿರಲಿಲ್ಲ: ಬೆಂಗಳೂರು ನಿವಾಸಿಗಳ ಬಾಯಾರಿಕೆ ತಣಿಸಲು 100 ಕಿ.ಮೀ. ದೂರದಲ್ಲಿ ಹರಿಯುವ ಕಾವೇರಿ ನದಿಯಿಂದ ನೀರು ತರುವುದು ಸುಲಭದ ಮಾತಾಗಿರಲಿಲ್ಲ. 1,500 ಮೀ. ಎತ್ತರದಿಂದ ನೀರನ್ನು ಪಂಪ್ ಮಾಡಿ, ನಗರಕ್ಕೆ ತಂದು, ಪೂರೈಸುವ ಸಲುವಾಗಿ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡಿತು. ಹತ್ತಾರು ಬಗೆಯ ಯೋಜನೆಗಳನ್ನು ರೂಪಿಸಬೇಕಾಯಿತು. ಇಷ್ಟೆಲ್ಲ ಪ್ರಯತ್ನಗಳ ಬಳಿಕವಷ್ಟೇ ಕಾವೇರಿ ಮಾತೆ ಬೆಂಗಳೂರಿನವರ ಮೇಲೆ ‘ಕಾರುಣ್ಯ’ದ ದೃಷ್ಟಿ ಬೀರಿದಳು. ಕಾವೇರಿಯ ‘ಓಲೈಕೆ’ಗಾಗಿ ಸರ್ಕಾರ ಮಾಡಿದ ಪ್ರಯತ್ನಗಳು ಹಾಗೂ ರೂಪಿಸಲಾದ ಯೋಜನೆಗಳು, ಅದರ ಅನುಷ್ಠಾನದ ಸಮಗ್ರ ಮಾಹಿತಿಯನ್ನು ಒಳಗೊಂಡ ಸಾಕ್ಷ್ಯತ್ರವನ್ನು ಸರ್ ಎಂ.ವಿ. ಮಳೆನೀರು ಸುಗ್ಗಿ ಕೇಂದ್ರದಲ್ಲಿ ಪ್ರದರ್ಶಿಸಲಾಗುತ್ತದೆ.
ಕೇರಳ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳ ನಿಯೋಗಗಳು ಇತ್ತೀಚೆಗೆ ಕೇಂದ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡವು. ತಮ್ಮ ರಾಜ್ಯಗಳಲ್ಲೂ ಇದೇ ಮಾದರಿಯ ಕೇಂದ್ರ ಸ್ಥಾಪಿಸುವ ಉದ್ದೇಶ ಇರುವುದಾಗಿ ನಿಯೋಗದ ಸದಸ್ಯರು ತಿಳಿಸಿದರು. ವಿದ್ಯಾರ್ಥಿಗಳಲ್ಲದೆ, ಬೆಂಗಳೂರು ನಗರದ ನಿವಾಸಿಗಳು ಕೂಡ ಕೇಂದ್ರಕ್ಕೆ ಭೇಟಿ ನೀಡಿ, ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು.
| ಕೆಂಪರಾಮಯ್ಯ ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಅಭಿಯಂತರ
ಚಿತ್ರ ಪ್ರದರ್ಶನ
ಮಳೆನೀರು ಸುಗ್ಗಿ ಕೇಂದ್ರದ ವೀಕ್ಷಣೆಗೆ ಆಗಮಿಸುವವರಿಗಾಗಿ ಮಳೆ ಕೊಯ್ಲು ಕುರಿತ ಸಾಕ್ಷ್ಯತ್ರಗಳ ಪ್ರದರ್ಶನದ ವ್ಯವಸ್ಥೆಯನ್ನು ಈ ಕೇಂದ್ರ ಹೊಂದಿದೆ. ಇದಕ್ಕಾಗಿ 70 ಆಸನಗಳ ವ್ಯವಸ್ಥೆಯುಳ್ಳ ಅತ್ಯಾಧುನಿಕ ಸಭಾಂಗಣವನ್ನು ನಿರ್ವಿುಸಲಾಗಿದೆ. ವಿದ್ಯಾರ್ಥಿಗಳಿಗಾಗಿ ‘ವರುಣ’, ‘ದಾಹ’, ‘ತುಂತುರು’ ಮತ್ತಿತರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ನಗರಕ್ಕೆ ಕುಡಿಯುವ ನೀರೊದಗಿಸುವ ಕಾವೇರಿ ಯೋಜನೆ ಅನುಷ್ಠಾನದಿಂದ ಹಿಡಿದು ನೀರು ಪೂರೈಕೆವರೆಗಿನ ಮಾಹಿತಿ ಒದಗಿಸುವ ‘ಜರ್ನಿ ಆಫ್ ಕಾವೇರಿ’ ಎಂಬ 20 ನಿಮಿಷದ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.