ಕರ್ನಾಟಕ

ಬಿಇಒ, ಡಿಡಿಪಿಐಗಳ ವರ್ಗಾವಣೆಗೆ ಸರ್ಕಾರದ ಮೀನಮೇಷ

Pinterest LinkedIn Tumblr

raಬೆಂಗಳೂರು: ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಮೂಲವಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರ ವರ್ಗಾವಣೆಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತಾತ್ಮಕ ಹುದ್ದೆಗಳಲ್ಲಿರುವವರ ವರ್ಗಾವಣೆಗೆ 2015ರ ಅ.16ರಂದೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಅಧಿಸೂಚನೆ ಬಂದ 6 ತಿಂಗಳ ಬಳಿಕವೂ ಬಿಇಒ, ಡಿಡಿಪಿಐ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಇತರ ಆಡಳಿತಾತ್ಮಕ ಹುದ್ದೆಯಲ್ಲಿರುವ ಉಪನಿರ್ದೇಶಕರ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ.

ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ 34 ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ ಹಾಗೂ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ವರ್ಗಾವಣೆಯಾಗಬೇಕು. ಇದರ ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಾನಾ ಆಡಳಿತಾತ್ಮಕ ಹುದ್ದೆಯಲ್ಲಿರುವ ಡಯಟ್ ಹಿರಿಯ ಉಪನ್ಯಾಸಕರು, ಸಿಟಿಇ ಪ್ರಾಂಶುಪಾಲರು, ಉಪನ್ಯಾಸಕರು, ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕರು, ಸಿಟಿಇ ರೀಡರ್ ಅಧಿಕಾರಿಗಳನ್ನು ತೆಗೆಯಲೇಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳನ್ನು ವರ್ಗಾಯಿಸಲಾಗಿಲ್ಲ.

ಕಳೆದ ಬಜೆಟ್ ಅಧಿವೇಶನ ವೇಳೆಯೇ ಶಿಕ್ಷಕರು ಹಾಗೂ ಆಡಳಿತಾತ್ಮಕ ಅಧಿಕಾರಿಗಳ ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರಲಾಯಿತು. ಆದರೆ ಶಿಕ್ಷಕರ ವರ್ಗಾವಣೆಗೆ ತೋರಿದ ಆಸಕ್ತಿಯನ್ನು ಉಳಿದ ಅಧಿಕಾರಿಗಳ ವಿಚಾರದಲ್ಲಿ ಶಿಕ್ಷಣ ಇಲಾಖೆ ತೋರಿಸಲೇ ಇಲ್ಲ. ಶಿಕ್ಷಕರ ವರ್ಗಾವಣೆಗೆ ಕರಡು ನಿಯಮ ರಚಿಸದ ಇಲಾಖೆ, ಬಿಇಒ ಹಾಗೂ ಡಿಡಿಪಿಐ ವರ್ಗಾವಣೆಗೆ ಕರಡು ನಿಯಮ ಪ್ರಕಟಿಸಿ ಎರಡು ತಿಂಗಳ ಬಳಿಕ ಅಧಿಸೂಚನೆ ಹೊರಡಿಸಿತು. ಕರಡು ನಿಯಮದಲ್ಲಿದ್ದ ಕೆಲ ಅಂಶಗಳನ್ನೂ ಅಧಿಸೂಚನೆಯಲ್ಲಿ ಕೈಬಿಡಲಾಗಿದೆ. ಡಿಡಿಪಿಐಗಳ ಗರಿಷ್ಠ ಸೇವೆಯನ್ನು 2 ವರ್ಷದಿಂದ 3 ವರ್ಷಕ್ಕೆ ಏರಿಸಲಾಗಿದೆ. ಹಾಗೆಯೇ ಕನಿಷ್ಠ ಸೇವಾವಧಿಯನ್ನು 2 ವರ್ಷ ಎಂದು ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಆಡಳಿತ ವರ್ಗದ ಒತ್ತಡವೇ ಕಾರಣ ಎಂದು ತಿಳಿದುಬಂದಿದೆ.

ಭ್ರಷ್ಟರಿಗೆ ಇನ್ನೆಷ್ಟು ದಿನ ಮಣೆ?: ಸಚಿವರೇ ಒಪ್ಪಿಕೊಂಡ ಹಾಗೆ ಡಿಡಿಪಿಐ ಹಾಗೂ ಬಿಇಒ ಕೇಂದ್ರಗಳು ಭ್ರಷ್ಟಾಚಾರದ ಕೂಪವಾಗಿವೆ. ಆದರೆ ಯಾವುದೇ ಬದಲಾವಣೆ ಮಾಡದೇ ಇನ್ನೆಷ್ಟು ವರ್ಷಗಳ ಕಾಲ ನಡೆಸಿಕೊಂಡು ಹೋಗುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಪಿಯು ಇಲಾಖೆಯಲ್ಲೂ ಇದೇ ಸಮಸ್ಯೆ

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿಯೂ ಇದೇ ರೀತಿಯ ಸಮಸ್ಯೆಯಿದೆ. ಒಂದೇ ಕಚೇರಿಯಲ್ಲಿ ಹತ್ತಾರು ವರ್ಷ ಅಧಿಕಾರ ಅನುಭವಿಸುತ್ತಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ಆರೋಪಗಳೂ ಕೇಳಿಬಂದಿವೆ. ಆದರೆ ಈ ಉಪನಿರ್ದೇಶಕರ ಅಥವಾ ಆಡಳಿತಾತ್ಮಕ ಹುದ್ದೆಗಳಿಗೆ ಸಂಬಂಧಿಸಿ ವರ್ಗಾವಣೆಗೆ ಶಿಕ್ಷಣ ಇಲಾಖೆ ನಿಯಮ ರೂಪಿಸಿಲ್ಲ.

ಅಧಿಸೂಚನೆ ಹೊರಬಂದ ಬಳಿಕ ಪರಿಷತ್, ವಿಧಾನಸಭೆ ಹಾಗೂ ಪಂಚಾಯಿತಿ ಚುನಾವಣೆಗಳು ಬಂದವು. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ಬಳಿಕ ಪ್ರಕ್ರಿಯೆ ಆರಂಭವಾಗಲಿದೆ.

| ಕಿಮ್ಮನೆ ರತ್ನಾಕರ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

Write A Comment