
ಬೆಂಗಳೂರು; ನಾನು ತಪ್ಪು ಮಾಡಿದ್ದೇನೆ, ನನ್ನ ತಪ್ಪನ್ನು ಪ್ರಶ್ನಿಸಲು ನನ್ನ ಧರ್ಮ ಪತ್ನಿಯಿದ್ದಾಳೆ ಎಂದು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿರುವ ಅವರು, ನಾನು ತಪ್ಪು ಮಾಡಿದ್ದೇನೆ ನಿಜ. ಅದನ್ನು ಪ್ರಶ್ನಿಸಲು ನನ್ನ ಧರ್ಮಪತ್ನಿ ಇದ್ದಾಳೆ. ನನ್ನ ವೈಯಕ್ತಿಕ ಬದುಕಿನ ವಿಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕೊಟ್ಟವರು ಯಾರು? ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ನನ್ನ ವೈಯಕ್ತಿಕ ಜೀವನದ ವಿಷಯಗಳು ಕುರಿತು ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಸುದ್ದಿಗೋಷ್ಠಿಗಳನ್ನು ನಡೆಸಿ ಟೀಕೆಗಳನ್ನು ಮಾಡಿದ್ದಾರೆ. ಮೇಲ್ಮನೆ ಹಾಗೂ ಕೆಳಮನೆಯ ಸದಸ್ಯರು ಮಾತ್ರ ಸುದ್ದಿಗೋಷ್ಟಿ ನಡೆಸಬೇಕಾದ ಕಚೇರಿಯಲ್ಲಿ ಹಾದಿಬೀದಿಯಲ್ಲಿ ಓಡಾಡುವವರೆಲ್ಲ ಸುದ್ಧಿಗೋಷ್ಠಿ ನಡೆಬಹುದೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ತಾವು ತಪ್ಪು ಮಾಡಿರುವುದಾಗಿ ಹೇಳಿಕೊಂಡ ಹೆಚ್ ಡಿಕೆ, ನಾನು ತಪ್ಪು ಮಾಡಿದ್ದೇನೆ. ನನ್ನ ತಪ್ಪನ್ನು ಪ್ರಶ್ನಿಸಲು ನನ್ನ ಧರ್ಮಪತ್ನಿ ಇದ್ದಾಳೆ. ನನ್ನ ವೈಯಕ್ತಿಕ ಬದುಕಿನಲ್ಲಿ ತಲೆ ಹಾಕಲು ಇವರು ಯಾರು. ವೈಯಕ್ತಿಕ ವಿಚಾರವನ್ನಿಡಿದು ನನ್ನ ತೇಜೋವಧೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಂತರ ತಮ್ಮ ಮಗ ನಿಖಿಲ್ ಗೌಡ ಕುರಿತಂತೆ ವ್ಯಕ್ತವಾಗುತ್ತಿರುವ ಟೀಕೆ ಕುರಿತಂತೆ ಮಾತನಾಡಿರುವ ಅವರು, ನನ್ನ ಮಗ ದುಬಾರಿ ಕಾರು ಬಳಸುತ್ತಿರುವ ಬಗ್ಗೆ ಹಾಗೂ ಸಿನಿಮಾಗಳಿಗೆ ಹಣ ಖರ್ಚು ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ನನ್ನ ಮಗನಿಗೆ ಸಂಬಂಧಪಟ್ಟ ವಿಚಾರದ ನಿಮಗೆ ಯಾಕೆ ಉತ್ತರ ನೀಡಬೇಕು. ನನ್ನ ಮಗ ಜನಪ್ರತಿನಿಧಿಯಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ನೀಡಲು. ಒಂದು ಪ್ರಶ್ನಿಸುವುದೇ ಆದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸಬೇಕು ಎಂದು ತಿರುಗೇಟು ನೀಡಿದ್ದಾರೆ.