ಕರ್ನಾಟಕ

ವಿಧಾನಸಭೆ ಕಲಾಪದಲ್ಲಿ “ಲಾಠಿಚಾರ್ಜ್’ ಗ‍ದ್ದಲ, ವಿಪಕ್ಷಗಳಿಂದ ಕೋಲಾಹಲ

Pinterest LinkedIn Tumblr

160301kpn69ಬೆಂಗಳೂರು: ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಪ್ರಕರಣ ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಗುರುವಾರ ಕೋಲಾರ, ಚಿಕ್ಕಬಳ್ಳಾಪುರ ರೈತರು ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.

ಇಂದು ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ರೈತರ ಮೇಲಿನ ಪೊಲೀಸರ ಲಾಠಿಚಾರ್ಜ್ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಬಿಜೆಪಿ, ಜೆಡಿಎಸ್ ಪಟ್ಟು ಹಿಡಿದವು. ಈ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಉತ್ತರ ನೀಡಿ, ರೈತರು ಟ್ರ್ಯಾಕ್ಟರ್ ಅನ್ನು ಪೊಲೀಸರ ಮೇಲೆ ಹತ್ತಿಸಲು ಯತ್ನಿಸಿದ್ದರು. ಆಗ ಪೊಲೀಸರು ಲಾಠಿಚಾರ್ಚ್ ನಡೆಸಿದ್ದರು. ಟ್ರ್ಯಾಕ್ಟರ್ ನಿಂದಾಗಿ ಕೆಲವು ವಾಹನಗಳಿಗೂ ಹಾನಿಯಾಗಿದೆ. ಅಲ್ಲದೇ ನಿನ್ನೆ ಬಂಧಿಸಿದ್ದ ಎಲ್ಲಾ ರೈತರನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಗೃಹ ಸಚಿವ ಪರಮೇಶ್ವರ್ ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ, ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಕೊನೆಗೆ ರೈತರ ಮೇಲಿನ ಪೊಲೀಸರ ಲಾಠಿಚಾರ್ಚ್ ಪ್ರಕರಣದ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಚರ್ಚೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಧರಣಿ ಹಿಂಪಡೆದವು. ನಂತರ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೆರಳಿದ ಸಿಎಂ ಸಿದ್ದರಾಮಯ್ಯ
ಲಾಠಿಚಾರ್ಜ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜಗದೀಶ್ ಶೆಟ್ಟರ್ ನಡುವೆ ತೀವ್ರ ವಾಕ್ಸಮರ ನಡೆಯಿತು. ಗೋಲಿಬಾರ್ ಸರ್ಕಾರಕ್ಕೆ ಎಂದು ಪ್ರತಿಪಕ್ಷಗಳತ್ತ ಕೈಬೀಸುತ್ತಾ ಸಿದ್ದರಾಮಯ್ಯ ಕೂಗಿದರು. ಬಿಜೆಪಿಯವರು ಧಿಕ್ಕಾರ ಎಂದು ಕೂಗುತ್ತಿದ್ದಂತೆಯೇ ನಿಮಗೆ ಎಂದರು.
-ಉದಯವಾಣಿ

Write A Comment