ಅಂತರಾಷ್ಟ್ರೀಯ

ಅಮೆರಿಕದ ಧಾರ್ಮಿಕ ಆಯೋಗಕ್ಕೆ ವಿಸಾ ನಿರಾಕರಣೆ

Pinterest LinkedIn Tumblr

nirakaranaವಾಷಿಂಗ್ಟನ್‌ (ಪಿಟಿಐ): ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ ಅಮೆರಿಕದ ಧಾರ್ಮಿಕ ಆಯೋಗವೊಂದರ ನಿಯೋಗಕ್ಕೆ ಭಾರತ ಸರ್ಕಾರ ವಿಸಾ ನಿರಾಕರಿಸಿದೆ.

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಸಲು ಹಾಗೂ ಆ ಬಗ್ಗೆ ವರದಿ ನೀಡಲು ಒಂದು ವಾರ ಕಾಲ ಭಾರತಕ್ಕೆ ಭೇಟಿ ನೀಡಲು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯದ ಅಂತರರಾಷ್ಟ್ರೀಯ ಆಯೋಗ (ಯುಎಸ್‌ಸಿಐಆರ್‌ಎಫ್‌) ಮುಂದಾಗಿತ್ತು.

ಆಯೋಗದ ಮೂರು ಮಂದಿ ಸದಸ್ಯರ ನಿಯೋಗ ಶುಕ್ರವಾರದಿಂದ (ಮಾ.4) ಒಂದು ವಾರ ಕಾಲ ಭಾರತ ಪ್ರವಾಸಕ್ಕೆ ಉದ್ದೇಶಿಸಿತ್ತು. ಭಾರತದ ಧಾರ್ಮಿಕ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ನಿಯೋಗ ಬಯಸಿತ್ತು.

‘ವಿಸಾ ನಿರಾಕರಿಸಿರುವ ಭಾರತ ಸರ್ಕಾರದ ಕ್ರಮದಿಂದ ನಮಗೆ ತೀವ್ರ ನೋವಾಗಿದೆ’ ಎಂದು ಯುಎಸ್‌ಸಿಐಆರ್‌ಎಫ್‌ ಅಧ್ಯಕ್ಷ ರಾಬರ್ಟ್‌ ಪಿ. ಜಾರ್ಜ್‌ ತಿಳಿಸಿದ್ದಾರೆ.

‘ಅಮೆರಿಕದೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಹಾಗೂ ಬಹುತ್ವದ, ಬಹುಪಂಥದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಮುಂದೆ ನಮ್ಮ ಭೇಟಿಗೆ ಸಮ್ಮತಿ ಸೂಚಿಸುವ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.

ಯುಎಸ್‌ಸಿಐಆರ್‌ಎಫ್‌ ಸದಸ್ಯರಿಗೆ ವಿಸಾ ನಿರಾಕರಿಸಿರುವುದು ಇದೇ ಮೊದಲೇನಲ್ಲ. ವಿವಿಧ ರಾಷ್ಟ್ರಗಳ ಧಾರ್ಮಿಕ ಸ್ವಾತಂತ್ರ್ಯ ಕುರಿತು ವಾರ್ಷಿಕ ವರದಿ ಸಿದ್ಧಪಡಿಸಿದ ಯುಎಸ್‌ಸಿಐಆರ್‌ಎಫ್‌ ಸದಸ್ಯರಿಗೆ ಯುಪಿಎ ಸರ್ಕಾರದ ಅವಧಿಯಲ್ಲೂ ವಿಸಾ ನಿರಾಕರಿಸಲಾಗಿತ್ತು.

‘ಪಾಕಿಸ್ತಾನ, ಸೌದಿ ಅರೇಬಿಯಾ, ವಿಯೆಟ್ನಾಂ, ಚೈನಾ, ಬರ್ಮಾ ಸೇರಿದಂತೆ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ಅನೇಕ ರಾಷ್ಟ್ರಗಳಲ್ಲಿ ಪ್ರವಾಸ ಮಾಡಲು ಯುಎಸ್‌ಸಿಐಆರ್‌ಎಫ್‌ ಮುಕ್ತವಾಗಿದೆ’ ಎಂದು ಜಾರ್ಜ್‌ ಹೇಳಿದ್ದಾರೆ.

‘ಭಾರತವು ಈ ರಾಷ್ಟ್ರಗಳಿಗಿಂತ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ. ಭಾರತ ಸರ್ಕಾರ ತನ್ನ ದೃಷ್ಟಿಕೋನವನ್ನು ನೇರವಾಗಿ ಯುಎಸ್‌ಸಿಐಆರ್‌ಎಫ್‌ ಜತೆಗೆ ಹಂಚಿಕೊಳ್ಳಬಹುದು’ ಎಂದು ಜಾರ್ಜ್‌ ತಿಳಿಸಿದ್ದಾರೆ.

Write A Comment