ರಾಷ್ಟ್ರೀಯ

60 ಲಕ್ಷ ಕೊರಿಯನ್ನರಿಗೆ ರಾಮನ ಅಯೋಧ್ಯೆಯು ತವರು ಮನೆಯಾಗಿರುವುದೇಕೆ ?

Pinterest LinkedIn Tumblr

Korean Ayodhya-700ಲಕ್ನೋ : ವರ್ಷಂಪ್ರತಿ ದಕ್ಷಿಣ ಕೊರಿಯದ ನೂರಾರು ಪ್ರವಾಸಿಗರು ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ಕೊಟ್ಟು ತಮ್ಮ ತಾಯ್ನಾಡಲ್ಲಿ ದಂತ ಕಥೆಯಾಗಿರುವ ರಾಣಿ ಹುರ್‌ ಹ್ವಾಂಗ್‌ ಓಕ್‌ ಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ ಎಂದು ಹೇಳಿದರೆ ನೀವು ಅಚ್ಚರಿ ಪಡಬಹುದು. ಎಲ್ಲಿಯ ಕೊರಿಯ, ಎಲ್ಲಿಯ ಅಯೋಧ್ಯೆ – ಎತ್ತಣಿಂದೆತ್ತ ಸಂಬಂಧ !

ಅಂದ ಹಾಗೆ ದಕ್ಷಿಣ ಕೊರಿಯದ ನಿಯೋಗವೊಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರನ್ನು ಮೊನ್ನೆ ಸೋಮವಾರ ಭೇಟಿಯಾಗಿ ಅಯೋಧ್ಯೆಯಲ್ಲಿ ರಾಣಿ ಹುರ್‌ ಹ್ವಾಂಗ್‌ ಓಕ್‌ ಗೆ ಸ್ಮಾರಕವೊಂದನ್ನು ನಿರ್ಮಿಸುವ ಕುರಿತಾಗಿ ಚರ್ಚಿಸಿತು. ಇಷ್ಟಕ್ಕೂ ಈ ರಾಣಿ ಹುರ್‌ ಹ್ವಾಂಗ್‌ ಓಕ್‌ ಯಾರು ಎನ್ನುವಿರಾ ? ಆಕೆ ಅಯೋಧ್ಯೆಯ ರಾಜಕುಮಾರಿಯಾಗಿದ್ದಳು; ಆಕೆಯ ಮೂಲ ಹೆಸರು ರಾಜಕುಮಾರಿ ಸುರಿ ರತ್ನಾ.

ಐತಿಹಾಸಿಕ ಪುರಾವೆಗಳ ಪ್ರಕಾರ ರಾಜಕುಮಾರಿ ಸುರಿ ರತ್ನಾ ಕ್ರಿಸ್ತ ಶಕ 48ರ ಸುಮಾರಿಗೆ ಅಯೋಧ್ಯೆಯಿಂದ ಕೊರಿಯಕ್ಕೆ ಪ್ರಯಾಣಿಸಿ ಕೊರಿಯದ ಕರಾಕ್‌ ವಂಶದ ಅರಸ ಕಿಂಗ್‌ ಕಿಂ ಸುರೋ ಎಂಬಾತನನ್ನು ಅಲ್ಲಿ ಮದುವೆಯಾಗಿದ್ದಳು. ಮದುವೆಯ ಬಳಿಕ ಅಲ್ಲಿ ಆಕೆ ಹುರ್‌ ಹ್ವಾಂಗ್‌ ಓಕ್‌ ಎಂದು ಕರೆಯಲ್ಪಟ್ಟಳು.

ಕೊರಿಯದ ಕರಾಕ್‌ ವಂಶಸ್ಥರು ಇಂದಿಗೂ ವರ್ಷಂಪ್ರತಿ ಉತ್ತರ ಪ್ರದೇಶದ ಅಯೋಧ್ಯೆಗೆ ಬಂದು ರಾಣಿ ಹುರ್‌ ಹ್ವಾಂಗ್‌ ಓಕ್‌ ಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಏಕೆಂದರೆ ಅವರಿಗೆ ತಮ್ಮ ರಾಣಿಯಿಂದಾಗಿ ಅಯೋಧ್ಯೆಯು ತಮ್ಮದೇ ತವರು ಮನೆ ಆಗಿದೆ !

ಅಂತೆಯೇ ತಮ್ಮ ತವರು ಮನೆಯಾಗಿರುವ ಉತ್ತರ ಪ್ರದೇಶದ ಅಯೋಧ್ಯೆಗೆ ವರ್ಷಂಪ್ರತಿ ಬಂದು ರಾಣಿಗೆ ಶ್ರದ್ಧಾಂಜಲಿ ಅರ್ಪಿಸುವುದು ಕರಾಕ್‌ ವಂಶಸ್ಥರ ಮಟ್ಟಿಗೆ ಪ್ರಾಚೀನ ಕಾಲದಿಂದಲೂ ಅನೂಚಾನವಾಗಿ ನಡೆದು ಬಂದಿರುವ ಪದ್ಧತಿ ಮತ್ತು ಪರಂಪರೆಯಾಗಿದೆ. ಹಾಗೆಯೇ ಇಂದಿಗೂ ಅದನ್ನು ಅವರು ಶ್ರದ್ಧಾ ಗೌರವಗಳೊಂದಿಗೆ ಉಳಿಸಿಕೊಂಡು ಬಂದಿದ್ದಾರೆ. ಒಂದು ಅಂದಾಜಿನ ಪ್ರಕಾರ ಈಗ ದಕ್ಷಿಣ ಕೊರಿಯದಲ್ಲಿ ಕರಾಕ್‌ ವಂಶಕ್ಕೆ ಸೇರಿದ ಸುಮಾರು 60 ಲಕ್ಷ ಜನರು ಇದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ದಕ್ಷಿಣ ಕೊರಿಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಕೊರಿಯನ್‌ ಜನರಿಗೆ ಅಯೋಧ್ಯೆಯೊಂದಿಗೆ ಇರುವ ಪಾರಂಪರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುವುದಾಗಿ ಘೋಷಿಸಿದ್ದರು. ಅಯೋಧ್ಯೆಯಲ್ಲಿ ರಾಜಕುಮಾರಿ ಸುರಿ ರತ್ನಾಗೆ ಬೃಹತ್‌ ಸ್ಮಾರಕವೊಂದನ್ನು ನಿರ್ಮಿಸುವುದಕ್ಕೆ ಉಭಯ ದೇಶಗಳ ನಾಯಕರು ಅಂದು ಒಪ್ಪಿಕೊಂಡಿದ್ದರು.

ತಮ್ಮನ್ನು ಭೇಟಿಯಾದ ಕೊರಿಯನ್‌ ನಿಯೋಗಕ್ಕೆ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರು ರಾಜಕುಮಾರಿ ಸುರಿ ರತ್ನಾಗೆ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರಕಾರವು ತನ್ನ ಖರ್ಚಿನಲ್ಲೇ ಕೊರಿಯನ್‌ ವಾಸ್ತುಶೈಲಿಯ ಬೃಹತ್‌ ಸ್ಮಾರಕ ನಿರ್ಮಿಸುವುದೆಂಬ ಭರವಸೆಯನ್ನು ನೀಡಿದರು. ಈ ಸಂಬಂಧ ಸಾಧ್ಯವಿರುವಷ್ಟು ಬೇಗನೆ ಕೊರಿಯನ್‌ ವಾಸ್ತುಶೈಲಿಯ ವಿನ್ಯಾಸವೊಂದನ್ನು ತಮಗೆ ನೀಡುವಂತೆ ಅಖೀಲೇಶ್‌ ಅವರು ಕೇಂದ್ರ ಕರಾಕ್‌ ವಂಶಸ್ಥರ ಸಂಘದ ಅಧ್ಯಕ್ಷರಾಗಿರುವ ಹಾಗೂ ಕೊರಿಯನ ನಿಯೋಗದ ನೇತೃತ್ವ ವಹಿಸಿದ್ದ ರಿಮ್‌ ಕಿ ಜೇ ಅವರಿಗೆ ಸೂಚಿಸಿದರು.
-ಉದಯವಾಣಿ

Write A Comment