ಕರ್ನಾಟಕ

ರಾಜ್ಯಪಾಲರ ಭಾಷಣ ನಿರಾಶದಾಯಕ-ಶೆಟ್ಟರ್

Pinterest LinkedIn Tumblr

Jagadish-Shettar_5ಬೆಂಗಳೂರು, ಫೆ. ೨೯- ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ನಿರಾಶದಾಯಕವಾಗಿದ್ದು, ಕಾಟಾಚಾರಕ್ಕೆ ಸರ್ಕಾರ ಸಾಂಪ್ರದಾಯಿಕವಾಗಿ ರಾಜ್ಯಪಾಲರ ಭಾಷಣವನ್ನು ಮಾಡಿಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪ ಇಲ್ಲ. ಆತ್ಮಹತ್ಯೆ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಹೇಳಿಲ್ಲ. ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಈ ಸಂದರ್ಭದಲ್ಲಿ ಆ ಬಗ್ಗೆಯೂ ಪ್ರಸ್ತಾಪವಿಲ್ಲ. ವಿದ್ಯುತ್ ಕೊರತೆ ಸರಿದೂಗಿಸಲು ಏನು ಮಾಡುತ್ತೇವೆ ಎಂಬುದನ್ನು ಹೇಳಿಲ್ಲ. ರಾಜ್ಯಪಾಲರ ಭಾಷಣ ಕಾಟಾಚಾರದ ಭಾಷಣವಾಗಿದೆ ಎಂದರು.

ಹೈದರಾಬಾದ್- ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ. ಜೊತೆಗೆ 7 ಸಾವಿರ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಸರ್ಕಾರ ಆ ಬಗ್ಗೆಯೂ ಭಾಷಣದಲ್ಲಿ ಏನನ್ನೂ ಹೇಳಿಲ್ಲ ಎಂದರು.

ರಾಜ್ಯಪಾಲರ ಭಾಷಣ ದೂರದೃಷ್ಟಿ, ದೂರದರ್ಶಿತ್ವ ಎರಡೂ ಇಲ್ಲದ ಭಾಷಣವಾಗಿದ್ದು, ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದಕ್ಕಷ್ಟೇ ಈ ಸರ್ಕಾರ ಸೀಮಿತವಾಗಿದೆ ಎಂಬುದು ಭಾಷಣದಿಂದ ಸ್ಪಷ್ಟವಾಗಿದೆ ಎಂದರು.

ಸರ್ಕಾರದಷ್ಟೇ ಸಪ್ಪೆ

ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್‌ನ ವೈ.ಎಸ್.ವಿ. ದತ್ತಾ ಅವರು, ಸರ್ಕಾರದಂತೆ ರಾಜ್ಯಪಾಲರ ಭಾಷಣವೂ ಸಪ್ಪೆಯಾಗಿದೆ ಎಂದರು.

ರಾಜ್ಯಪಾಲರ ಭಾಷಣ ಬಜೆಟ್‌ನ ಅನುಪಾಲನಾ ವರದಿಯಂತಿದೆ. ಹೋದ ವರ್ಷ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ ಅಂಕಿ- ಅಂಶಗಳನ್ನು ಈ ಭಾಷಣದಲ್ಲಿ ಹೇಳಲಾಗಿದೆ ಎಂದರು.

ರಾಜ್ಯಪಾಲರ ಭಾಷಣವೆಂದರೆ ಭೂತ, ವರ್ತಮಾನಗಳ ಜೊತೆಗೆ ಭವಿಷ್ಯದ ಸ್ಪಷ್ಟ ದಿಕ್ಸೂಚಿಯನ್ನು ಸೂಚಿಸುವ ಮಾದರಿ ಇರಬೇಕು. ಆದರೆ ಇಂದಿನ ಭಾಷಣ ಸರ್ಕಾರದಂತೆ ಸಪ್ಪೆ ಎಂದರು.

ಮುನ್ನೋಟ ಅಲ್ಲ

ರಾಜ್ಯಪಾಲರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ಸಿ.ಟಿ. ರವಿ, ರಾಜ್ಯಪಾಲರ ಭಾಷಣ ಕೇಂದ್ರ ಸರ್ಕಾರದ ಯೋಜನೆಗಳ ನಕಲಿನಂತಿದೆ. ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಮುನ್ನೋಟ ಇಲ್ಲ. ರಾಜ್ಯಪಾಲರ ಭಾಷಣ ಸರ್ಕಾರದ ವೈಫಲ್ಯದ ಪ್ರಗತಿ ವರದಿ ಎಂದವರು ಟೀಕಿಸಿದರು.

Write A Comment