ಕರ್ನಾಟಕ

ಬಿಜೆಪಿ-ಜೆಡಿಎಸ್ ದೋಸ್ತಿ…? ಹೊಸ ರಾಜಕೀಯ ಧ್ರುವೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ

Pinterest LinkedIn Tumblr

jdsಬೆಂಗಳೂರು, ಫೆ.29-ಅತಂತ್ರವಾಗಿರುವ ರಾಜ್ಯದ 11 ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಯಾಗಲು ವೇದಿಕೆ ಸಿದ್ಧವಾಗುವುದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಧ್ರುವೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ನಿಚ್ಚಳವಾಗಿದೆ. ಶತಾಯಗತಾಯ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲೇಬೇಕೆಂದು ತೀರ್ಮಾನಿಸಿರುವ ಉಭಯ ಪಕ್ಷಗಳ ನಾಯಕರು ಹಳೇ ವೈಷಮ್ಯ ಮರೆತು ದೋಸ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ.ಫೆಬ್ರವರಿ 29 ರಿಂದ ಮಾರ್ಚ್ 5 ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದು ಮೈತ್ರಿ ಕುರಿತು ಚರ್ಚಿಸುವುದು.

ಅಧಿವೇಶನ ಮುಗಿದ ನಂತರ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಸಮಾವೇಶ ನಡೆಸಿ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆ, 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾದ ನಂತರವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ. ಜೆಡಿಎಸ್ ಮತ್ತು ಬಿಜೆಪಿ ಜತೆಗೂಡಿದರೆ ತುಮಕೂರು, ಮೈಸೂರು, ಬೆಂಗಳೂರು ನಗರ, ಶಿವಮೊಗ್ಗ, ರಾಯಚೂರು ಸೇರಿದಂತೆ 7 ಜಿಲ್ಲಾ ಪಂಚಾಯಿತಿ ಹಾಗೂ 20 ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇದರ ಪ್ರಕಾರ ಒಂದು ಬಾರಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಲ್ಲಿ ಅಧ್ಯಕ್ಷರಾದರೆ ಐದು ವರ್ಷ ಆಡಳಿತ ನಡೆಸಬಹುದು.

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಯಲ್ಲಿ ಪಕ್ಷ ಅಧಿಕಾರದಲ್ಲಿದ್ದರೆ ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಬಹುದು. ಹೀಗಾಗಿಯೇ ಜೆಡಿಎಸ್ ಮತ್ತು ಬಿಜೆಪಿ ದೋಸ್ತಿಗೆ ಸಿದ್ಧವಾಗಿವೆ. ಜೆಡಿಎಸ್ ಮತ್ತು ಬಿಜೆಪಿ ಜತೆಗೂಡಿದರೆ ತುಮಕೂರು, ಮೈಸೂರು, ಬೆಂಗಳೂರು ನಗರ, ಶಿವಮೊಗ್ಗ, ರಾಯಚೂರು ಸೇರಿದಂತೆ 7 ಜಿಲ್ಲಾ ಪಂಚಾಯಿತಿ ಹಾಗೂ 20 ತಾಲೂಕು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಪಂಚಾಯತ್‌ಗೆ ಸೀಮಿತವಾಗಿ ಮೈತ್ರಿ ಮಾಡಿಕೊಂಡು ಯಶಸ್ವಿಯಾದರೆ ಆ ನಂತರ ಪ್ರತಿಕ್ರಿಯೆ, ಸ್ಪಂದನೆ, ಸಹಕಾರ ನೋಡಿಕೊಂಡು ಬಿಬಿಎಂಪಿ ಸೇರಿ ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಮುಂದುವರಿಸುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಪ್ರಸಕ್ತ ರಾಜಕೀಯ ಸ್ಥಿತಿಯಲ್ಲಿ ಕಾಂಗ್ರೆಸ್ ಜತೆ ಹೋಗಲು ಬಯಸದ ಜೆಡಿಎಸ್‌ನ ಬಹುತೇಕ ಶಾಸಕರು, ಬಿಜೆಪಿ ಜತೆ ಸೇರಿ ಅಧಿಕಾರ ಹಂಚಿಕೆ ಮಾಡಿಕೊಳ್ಳೋಣ ಎಂಬ ಅಭಿಪ್ರಾಯ ಹೊಂದಿರುವುದು ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರೇ ಖುದ್ದಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೈಟಿ ಮಾಡಿ ಮೈತ್ರಿ ಪ್ರಸ್ತಾಪ ಇಟ್ಟಿರುವುದರಿಂದ ಬಿಜೆಪಿ ಜತೆ ಮೈತ್ರಿ ಅಂತಿಮವಾಗಬಹುದು ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದು, ಬಿಜೆಪಿ ಜತೆ ಹೋದರೆ ರಾಜಕೀಯವಾಗಿ ಪಕ್ಷಕ್ಕೂ ಲಾಭವಾಗಬಹುದು ಎಂಬ ಅಭಿಪ್ರಾಯ ಈ ವೇಳೆ ವ್ಯಕ್ತವಾಗಿದೆ.

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್-10, ಬಿಜೆಪಿ-7 ಹಾಗೂ ಜೆಡಿಎಸ್-2 ಜಿಲ್ಲೆಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. 11 ಜಿಲ್ಲೆಗಳ ಫಲಿತಾಂಶ ಅತಂತ್ರವಾಗಿದ್ದು, 7 ಜಿಲ್ಲೆಗಳಲ್ಲಿ ಜೆಡಿಎಸ್ ನಿರ್ಣಾಯಕವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಸಿದ್ಧ ಎನ್ನುವ ಮೂಲಕ ಜೆಡಿಎಸ್ ಜೊತೆಗೆ ದೋಸ್ತಿ ಸಿದ್ಧ ಎಂದು ಸಂದೇಶವನ್ನು ರವಾನಿಸಿದ್ದಾರೆ.ಆದರೆ ವಾಚ್ ಪ್ರಕರಣದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಣಕಿದ್ದರು. ಅಂತಿಮವಾಗಿ ಕಾಂಗ್ರೆಸ್‌ನ ಒಂದು ತಂಡ ದೇವೇಗೌಡರ ಕುಟುಂಬದ ಸದಸ್ಯರು ಹೊಂದಿರುವ ಬೆಲೆ ಬಾಳುವ ವಸ್ತುಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಕೈ ಜೋಡಿಸಬಾರದೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ಎಲ್ಲಲ್ಲಿ ದೋಸ್ತೀ …?

ರಾಯಚೂರು- 38 ಸ್ಥಾನಗಳಿರುವ ಈ ಪಂಚಾಯಿತಿಯಲ್ಲಿ ಕನಿಷ್ಠ 20 ಸ್ಥಾನ ಗೆದ್ದವರು ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿ 17, ಕಾಂಗ್ರೆಸ್ 12, ಜೆಡಿಎಸ್ 9 ಸ್ಥಾನ ಪಡೆದಿವೆ. ಯಾದಗಿರಿ- ಈ ಜಿಲ್ಲೆಯಲ್ಲಿ ಒಟ್ಟು 24 ಸ್ಥಾನಗಳಿದ್ದು, ಕನಿಷ್ಠ 13 ಸ್ಥಾನ ಗೆದ್ದವರು ಬಹುಮತ ಪಡೆಯಲಿದ್ದಾರೆ. ಬಿಜೆಪಿ 11, ಕಾಂಗ್ರೆಸ್ 12 ಮತ್ತು ಜೆಡಿಎಸ್ 1 ಸ್ಥಾನ ಗೆದ್ದಿವೆ. ಮೈಸೂರು- 49 ಸ್ಥಾನಗಳ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕನಿಷ್ಠ 25 ಸ್ಥಾನ ಗೆದ್ದಿರಬೇಕು. ಕಾಂಗ್ರೆಸ್22 ಸ್ಥಾನ, ಜೆಡಿಎಸ್ 18 ಮತ್ತು ಬಿಜೆಪಿ 8 ಸ್ಥಾನಗಳನ್ನು ಗೆದ್ದಿವೆ.

ಕೋಲಾರ- 30 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಕಾಂಗ್ರೆಸ್ 15 ಸ್ಥಾನ ಗೆದ್ದಿದೆ. ಬಹುಮತಕ್ಕೆ ಇನ್ನೊಂದು ಮತ ಬೇಕು. ಆದರೆ, ಅದನ್ನು ಪಡೆಯಲು ಕಾಂಗ್ರೆಸ್ ಹೆಣಗಾಡಬೇಕಾಗುತ್ತದೆ. ಜೆಡಿಎಸ್ 10 ಮತ್ತು ಬಿಜೆಪಿ 5 ಸ್ಥಾನ ಗೆದ್ದಿವೆ. ಧಾರವಾಡ- ಒಟ್ಟು 22 ಜಿಲ್ಲಾ ಪಂಚಾಯಿತಿ ಸ್ಥಾನಗಳು ಇದ್ದು, . ಇಲ್ಲಿ ಬಿಜೆಪಿ 11 ಸ್ಥಾನ ಗೆದ್ದಿದ್ದು, ಬಹುಮತಕ್ಕೆ ಒಂದು ಸ್ಥಾನ ಬೇಕಾಗಿದೆ. ಪಕ್ಷೇತರರು ಒಬ್ಬರು ಗೆದ್ದಿದ್ದು, ಅವರೊಟ್ಟಿಗೆ ಸೇರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ತುಮಕೂರು- 57 ಸ್ಥಾನಗಳು ಇದ್ದು, ಕನಿಷ್ಠ 29 ಸ್ಥಾನ ಗೆದ್ದವರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಈ ಮ್ಯಾಜಿಕ್ ಸಂಖ್ಯೆ ತಲುಪಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಜೆಡಿಎಸ್ ಬೆಂಬಲ ಬೇಕೇಬೇಕು. ಕಾಂಗ್ರೆಸ್ 23 ಕಡೆ ಗೆದ್ದಿದೆ. ಜೆಡಿಎಸ್ 14 ಮತ್ತು ಬಿಜೆಪಿ19 ಕಡೆ ಗೆದ್ದಿದೆ. ಬಾಗಲಕೋಟೆ-36 ಸ್ಥಾನಗಳಲ್ಲಿ ಬಿಜೆಪಿ 18 ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್ 17 ಸ್ಥಾನ ಗೆದ್ದಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ಇದ್ದು, ಅವರು ಬಿಜೆಪಿಗೆ ಬೆಂಬಲಿಸಿದರೆ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ.

ವಿಜಯಪುರ-42 ಸ್ಥಾನಗಳ ಇರುವ ಈ ಪಂಚಾಯಿತಿಯಲ್ಲಿ ಬಹುಮತಕ್ಕೆ ಕನಿಷ್ಠ 22 ಸ್ಥಾನ ಗೆಲ್ಲಬೇಕು. ಇಲ್ಲಿ ಬಿಜೆಪಿ 20, ಕಾಂಗ್ರೆಸ್ 18 ಮತ್ತು ಜೆಡಿಎಸ್ 3 ಹಾಗೂ 1 ಸ್ಥಾನ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾನೆ. ಇಲ್ಲಿ ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೊ ಅವರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ.ಬೆಳಗಾವಿ- 90 ಸ್ಥಾನ ಇರುವ ಜಿಲ್ಲಾ ಪಂಚಾಯಿತಿಯಲ್ಲಿ . ಬಿಜೆಪಿ 39, ಕಾಂಗ್ರೆಸ್ 43, ಜೆಡಿಎಸ್ 2 ಮತ್ತು ಪಕ್ಷೇತರರು 6 ಕಡೆ ಗೆದ್ದಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಪಕ್ಷೇತರರು ಬೆಂಬಲಿಸಿದರೂ ಅದು ಅಧಿಕಾರಕ್ಕೆ ಬರುತ್ತದೆ. ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರು ಒಂದಾಗಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡುವುದಕ್ಕೂ ಅವಕಾಶ ಇದೆ.

Write A Comment