ಬೆಂಗಳೂರು: ವಿಜಯಪುರದ ಇಬ್ರಾಹಿಮ್ ರೌಜಾದಲ್ಲಿ ಚಿತ್ರೀಕರಣ ನಡೆಸಿದ್ದ ‘ಚೌಕ’ ಚಿತ್ರತಂಡದ ಮೇಲೆ ಶನಿವಾರ ಜೇನು ಹುಳುಗಳು ದಾಳಿ ನಡೆಸಿದ್ದರ ಪರಿಣಾಮವಾಗಿ ಸುಮಾರು 35 ಜನರಿಗೆ ಸಣ್ಣ ಪುಟ್ಟ ಗಾಯಗಳಾದದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಯಿತು. ಅದರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದರಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿ ಭಾನುವಾರ ಆಸ್ಪತ್ರೆಯಿಂದ ಹೊರಬಂದಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಮತ್ತು ಸಿನೆಮ್ಯಾಟೋಗ್ರಾಫರ್ ಎಸ್ ಕೃಷ್ಣ ಅವರೊಂದಿಗೆ ಸ್ಥಳದಲ್ಲಿದ್ದ ನಿರ್ದೇಶಕ ತರುಣ್ ಸುಧೀರ್ ಈ ಘಟನೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ನಾಯಕರಲ್ಲಿ ಒಬ್ಬರಾದ ಪ್ರಜ್ವಲ್ ದೇವರಾಜ್ ಅವರ ಭಾಗವನ್ನು ಇಬ್ರಾಹಿಮ್ ರೌಜಾದಲ್ಲಿ ಚಿತ್ರೀಕರಣ ನಡೆಸಿದ್ದೆವು. ಶನಿವಾರ ಸಂಜೆ ಸುಮಾರು ಐದು ಘಂಟೆಗೆ, ನಾವು ಚಿತ್ರೀಕರಣ ಮುಗಿಸುವ ವೇಳೆಗೆ, ನಮ್ಮ ಸೆಟ್ ನಿಂದ 20 ಮೀಟರ್ ದೂರದಲ್ಲಿದ್ದ ಜೇನು ಗೂಡಿನ ಬಗೆಗೆ ನಮಗೆ ಅರಿವಿತ್ತು. ಆದರೆ ಜೇನು ಹುಳುಗಳಿಗೆ ಏನು ತೊಂದರೆಯಾಯಿತೋ ಅಥವಾ ಯಾರಾದರೂ ಕಲ್ಲು ಹೊಡೆದರೋ ಗೊತ್ತಿಲ್ಲ, ಅವುಗಳ ನಮ್ಮತ್ತ ಧಾವಿಸಿದಾಗ ನಾವು ಅಘಾತದಲ್ಲಿದ್ದೆವು. ನಾನು ಮತ್ತು ಕೃಷ್ಣ ಛತ್ರಿ ಹಿಡಿದು ಮಲಗಿಬಿಟ್ಟೆವು. ಅದೃಷ್ಟವಶಾತ್ ನಾಯಕ ನಟನಿಗೂ ಹೆಚ್ಚಾಗಿ ಅವು ಕಚ್ಚಲಿಲ್ಲ. ಕೆಲವು ಚಿತ್ರ ತಂಡದ ಸದಸ್ಯರಿಗೆ ಗಂಭೀರವಾದ ಗಾಯಗಳಾದವು”. ಎಂದು ವಿವರಿಸುತ್ತಾರೆ.
ಚಿತ್ರೀಕರಣ ಮುಂದುವರೆಯುತ್ತಿದೆ. “ಚಿತ್ರೀಕರಣ ನಡೆಯುವಾಗ ಒದಗಬುಹುದಾದ ಗಂಭೀರ ಅಘಾತ ಇದು. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಇದು ಕಲಿಸಿಕೊಟ್ಟಿದೆ” ಎಂದು ವಿವರಿಸುತ್ತಾರೆ ತರುಣ್.
ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ 50 ನೆಯ ಚಿತ್ರ ‘ಚೌಕ’. ಪ್ರಜ್ವಲ್ ದೇವರಾಜ್ ಅಲ್ಲದೆ, ವಿಜಯ್ ರಾಘವೇಂದ್ರ, ದಿಗಂತ್ ಮತ್ತು ಚಿರಂಜೀವಿ ಸರ್ಜಾ ಕೂಡ ನಟಿಸಿದ್ದಾರೆ.