ಕರ್ನಾಟಕ

ಇನ್ನೆರಡು ವಾರಗಳಲ್ಲಿ ‘…ರೆ’ ಚಿತ್ರ ತೆರೆಗೆ

Pinterest LinkedIn Tumblr

re

ಸರಿಯಾಗಿ ಒಂದು ವರ್ಷದ ಹಿಂದೆ ಆರಂಭಿಸಿದ್ದ ‘…ರೆ’ ಚಿತ್ರ ಬಿಡುಗಡೆಯ ಹೊಸಿಲಲ್ಲಿ ನಿಂತಿದೆ. ಇನ್ನೆರಡು ವಾರಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಇನ್ನೇನು ಸೆನ್ಸಾರ್ ಮಂಡಳಿ ಚಿತ್ರ ನೋಡಿ ಗ್ರೀನ್ ಸಿಗ್ನಲ್ ಕೊಡುವುದಷ್ಟೇ ಬಾಕಿ. ಅದಾದ ತಕ್ಷಣ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದೆ ಚಿತ್ರತಂಡ.

ಬಹಳ ದಿನಗಳ ನಂತರ ಮತ್ತೆ ರಮೇಶ್ ಅರವಿಂದ್ ನಟನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘…ರೆ’. ‘ಇದು ಲವ್ ಟ್ರೈ ಆ್ಯಂಗಲ್ ಅಲ್ಲ. ಲವ್ ಸ್ಕ್ವೇರ್’ ಎಂದ ರಮೇಶ್, ‘ಭಾರತೀಯ ಚಿತ್ರರಂಗದಲ್ಲಿ ಇಂಥ ವಿಭಿನ್ನ ಪರಿಕಲ್ಪನೆಯ ಚಿತ್ರವನ್ನು ನಾನಂತೂ ನೋಡಿಲ್ಲ’ ಎಂದರು. ತಾವು ಅಂದುಕೊಂಡ ಭಾವ ನಟನೆಯಲ್ಲಿ ಸಿಗೋವರೆಗೂ ದೇಸಾಯಿ ಅವರು ಸುಮ್ಮನಿರುವವರಲ್ಲ ಎಂದು ನಿರ್ದೇಶಕರ ಬೆನ್ನು ಚಪ್ಪರಿಸಿದರು.

‘ದೇಸಾಯಿ ಅವರ ತಂಡ ನನಗೆ ಶಾಲೆಯಂತೆ ಇತ್ತು. ಅದಕ್ಕೇ ಈ ಚಿತ್ರವನ್ನು ನಾನು ನನ್ನ ಮೊದಲ ಚಿತ್ರದಂತೆಯೇ ಭಾವಿಸಿದ್ದೇನೆ’ ಎಂದರು ನಾಯಕಿ ಹರ್ಷಿಕಾ. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳೂ ಇವೆ ಎಂಬುದು ಮತ್ತೊಬ್ಬ ನಾಯಕಿ ಸುಮನ್ ಅನಿಸಿಕೆ. ಲೋಕನಾಥ್ ಮಾತನಾಡಿ, ‘ಕಣ್ಣೆದುರು ಯಾರೂ ಕಾಣಿಸುತ್ತಿರಲಿಲ್ಲ. ಆದರೂ ಸಂಭಾಷಣೆಯಲ್ಲೇ ಎಲ್ಲ ನಿಭಾಯಿಸಬೇಕಿತ್ತು’ ಎಂದರು. ‘ಸಿನಿಮಾದಲ್ಲಿ ರಮೇಶ್‌ಗೆ ಮದುವೆ ಮಾಡಿಸಬೇಕು ಎಂಬುದೇ ನಮ್ಮ ಪರಮಧ್ಯೇಯ’ ಎಂದರು ಎಸ್. ಶಿವರಾಂ.

‘ಬೇರೆ ಬೇರೆ ಕೋನಗಳಿಂದ ನೋಡಿದಾಗ ಬೇರೆ ಬೇರೆಯದೇ ರೀತಿಯಲ್ಲಿ ಪ್ರೇಕ್ಷಕನಿಗೆ ಈ ಚಿತ್ರ ದಕ್ಕುತ್ತದೆ. ಈ ಎಲ್ಲಕ್ಕೂ ಕೇಂದ್ರವಾಗಿರುವುದು ಮದುವೆ’ ಎಂದರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಆರ್. ಲೋಕೇಶ್ ಮೊದಲ ಬಾರಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಜಿ.ಎಸ್. ಭಾಸ್ಕರ್ ಛಾಯಾಗ್ರಹಣ, ಹಂಸಲೇಖ ಸಂಗೀತ ಚಿತ್ರಕ್ಕಿದೆ. ಜಿ.ಕೆ. ಗೋವಿಂದರಾವ್, ಪಿ.ಡಿ. ಸತೀಶ್, ಪ್ರಶಾಂತ್ ವೇದಿಕೆಯಲ್ಲಿದ್ದರು.

Write A Comment