ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ದುಬಾರಿ ವಾಚ್’ ಪ್ರಕರಣ ರಾಜಭವನದ ಅಂಗಳ ತಲುಪುತ್ತಿದ್ದಂತೆ ರಾಜ್ಯಪಾಲ ವಜೂಭಾಯ್ ವಾಲಾ ಅವರು ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.
ಮಾಹಿತಿ ಹಕ್ಕು ಹೋರಾಟಗಾರ ಭಾಸ್ಕರನ್, ಸಿಎಂ ಸಿದ್ದರಾಮಯ್ಯ ಬಳಿ ಸುಮಾರು 70 ಲಕ್ಷ ರೂ. ಬೆಲೆಬಾಳುವ ದುಬಾರಿ ವಾಚ್ ಇದೆ. ಇದರ ಮೂಲದ ಬಗ್ಗೆ ತನಿಖೆ ನಡೆಸಲು (ಪ್ರಾಸಿ ಕ್ಯೂಷನ್)ಗೆ ಅನುಮತಿ ನೀಡಬೇಕು ಎಂದು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಸಲು ಅನುಮತಿ ನೀಡಲು ತನಗೆ ಅಧಿಕಾರ ಇದೆಯೇ? ಇದು ತನ್ನ ವ್ಯಾಪ್ತಿಗೆ ಬರುತ್ತದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ನಾಲ್ಕೈದು ದಿನಗಳಲ್ಲಿ ಅಭಿಪ್ರಾಯ ತಿಳಿಸುವಂತೆ ಕಾನೂನು ತಜ್ಞರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಡುಗೊರೆ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ? ಈ ಹಿಂದೆ ದೇಶದ ಬೇರೆ ಬೇರೆ ಕಡೆ ಇಂಥ ಪ್ರಕರಣಗಳು ನಡೆದ ಉದಾಹರಣೆ ಇದೆಯೇ ಎಂಬ ಬಗ್ಗೆಯೂ ಮಾಹಿತಿ ನೀಡಲು ನಿರ್ದೇಶ ನೀಡಿದ್ದಾರೆ. ಭಾಸ್ಕರನ್ ದೂರಿನ ಜತೆ ನೀಡಿರುವ ದಾಖಲೆಗಳ ಸತ್ಯಾಸತ್ಯತೆ ಬಗ್ಗೆಯೂ ಪರಿಶೀಲನೆ ಮಾಡಲು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
-ಉದಯವಾಣಿ