ಕರ್ನಾಟಕ

ಯೋಧನನ್ನು ಮರೆತ ಗೃಹಸಚಿವ; ಜನರ ವ್ಯಾಪಕ ಆಕ್ರೋಶ

Pinterest LinkedIn Tumblr

hasan-solidireಹಾಸನ: ಸಿಯಾಚಿನ್ ಹಿಮಪಾತದಲ್ಲಿ ಸಾವನ್ನಪ್ಪಿದ ಯೋಧ ಟಿ.ಟಿ. ನಾಗೇಶ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸದೆ ತೆರಳಿದ ಗೃಹಸಚಿವ ಡಾ.ಜಿ. ಪರಮೇಶ್ವರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಪರಮೇಶ್ವರ್ ಅವರು, ಯೋಧ ನಾಗೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ರಸ್ತೆಯಲ್ಲೇ ಹೋದರು. ಆದರೆ, ಕಾರಿನಿಂದ ಇಳಿದು ಗೌರವ ಸಲ್ಲಿಸಲಿಲ್ಲ. ಇದನ್ನು ತಿಳಿದ ಸಾರ್ವಜನಿಕರು ಗೃಹಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮರಳಿ ಬಂದ ಪರಮೇಶ್ವರ್!
ಜನರ ಆಕ್ರೋಶವನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು, ಗೃಹಸಚಿವರಿಗೆ ಮಾಹಿತಿ ನೀಡುವ ಹೊತ್ತಿಗೆ ಅವರು ಹಿರೀಸಾವೆಯನ್ನು ತಲುಪಿದ್ದರು. ಮರಳಿ ಹಾಸನಕ್ಕೆ ಬಂದ ಅವರು ಯೋಧ ನಾಗೇಶ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ನಮನ ಸಲ್ಲಿಸಿದರು. ‘ಅಧಿಕಾರಿಗಳು ಮಾಹಿತಿ ನೀಡದೇ ಇದ್ದುದರಿಂದ ಈ ರೀತಿ ಆಗಿದೆ’ ಎಂಬ ಸಮಜಾಯಿಷಿಯನ್ನು ನೀಡಿ ಅವರು ತೆರಳಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟ ಯೋಧ ನಾಗೇಶ್ ಅವರ ಪಾರ್ಥಿವ ಶರೀರದ ಮೆರವಣಿಗೆಯು ಇದೀಗ ಅವರ ಗ್ರಾಮ ತೇಜೂರಿಗೆ ತಲುಪಿದ್ದು, ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಎಚ್.ಡಿ ಕೋಟೆ ವರದಿ (ಮೈಸೂರು ಜಿಲ್ಲೆ): ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದ ಯೋಧ ಮಹೇಶ್ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಲ್ಲಿಸಿದರು. ನಂತರ, ಮಹೇಶ್ ಅವರ ತಾಯಿ ಸರ್ವಮಂಗಳಾ ಅವರಿಗೆ ₹ 25 ಲಕ್ಷ ಮೌಲ್ಯದ ಚೆಕ್‌ ಅನ್ನು ವಿತರಿಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸಾವಿರಾರು ಜನ ಅಂತಿಮ ದರ್ಶನ ಪಡೆದರು. ನಂತರ, ಮಹೇಶ್ ಅವರ ಹುಟ್ಟೂರಾದ ಕೆ.ಆರ್ ನಗರ ತಾಲ್ಲೂಕಿನ ಪಶುಪತಿ ಗ್ರಾಮಕ್ಕೆ ಅವರ ಪಾರ್ಥಿವ ಶರೀರವನ್ನು ಒಯ್ಯಲಾಯಿತು.

Write A Comment