ಕಲಬುರಗಿ: ರಾಜ್ಯದ ಮೂರು ವಿಧಾನಸಭಾ ಉಪಚುನಾಚವಣೆ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇದು ಸರ್ಕಾರದ ವೈಫಲ್ಯದ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರ ವೈಫಲ್ಯ ಉಪಚುನಾವಣೆಯಲ್ಲಿನ ಫಲಿತಾಂಶದಿಂದ ಗೊತ್ತಾಗುತ್ತಿದೆ. ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ದೇವದುರ್ಗದಲ್ಲಿ ಇದೀಗ ಕಮಲ ಪಕ್ಷ ಅರಳಿದೆ. ಇದರಂತೆ ಹೆಬ್ಬಾಳದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದ್ದು, ಚುನಾವಣಾ ಸೋಲು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಗಂಟೆಯಾಗಿದೆ. ಕಾಂಗ್ರೆಸ್ ಹೈ ಕಮಾಂಡ್ ನವರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಂತರ ಬೀದರ್ ನಲ್ಲಿ ಸೋಲು ಕಂಡಿರುವುದರ ಕುರಿತಂತೆ ಮಾತನಾಡಿರುವ ಅವರು, ಬೀದರ್ ನಲ್ಲಿ ಪಕ್ಷ ಹಿನ್ನಡೆ ಕುರಿತಂತೆ ಅವಲೋಕನ ನಡೆಸಲಾಗುತ್ತದೆ. ನಮ್ಮ ನಿರೀಕ್ಷೆಯಂತೆ ಬೀದರ್ ನಲ್ಲಿ ಯಾವುದೇ ಕೆಲಸವಾಗಿಲ್ಲ. ಈ ಬಗ್ಗೆ ಅವಲೋಕನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ಗಡಿಯಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿಯಾರದ ವಿಷಯ ಚರ್ಚೆಯ ವಿಷಯವಾಗಿರುವುದು ವಿಷಾದಕರ. ಈ ವಿಷಯವನ್ನು ಸಿದ್ದರಾಮಯ್ಯ ಅವರು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೂಡಲೇ ದುಬಾರಿ ಕುರಿತ ಹಿಂದಿರುವ ಸತ್ಯವನ್ನು ಅವರು ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.