ಕರ್ನಾಟಕ

‘ಜನರು ಭಯಭೀತರಾಗಬಾರದು’

Pinterest LinkedIn Tumblr

A worker explain leopard how to escape from the cage to Additional Chief Secretary department of Forest environment & ecology Mahendra Jain at Rescue Center in Bannerghatta biological park in Bengaluru on Monday. Bannerghatta Biological Park Executive Director Santhosh Kumar are also seen.  Photo by B K Janardhan

ಬೆಂಗಳೂರು: ‘ಬೋನಿನಲ್ಲಿ ಇಟ್ಟ ಚಿರತೆ ತಪ್ಪಿಸಿಕೊಂಡದ್ದು ವಿರಳ. ಅದು ಹೇಗೆ ಹೋಯಿತು, ಅದಕ್ಕೆ ಕಾರಣ ಏನು ಮತ್ತಿತರ ಅಂಶಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆಗ ಸತ್ಯ ಹೊರಬರಲು ಸಾಧ್ಯ’ ಎಂದು ವನ್ಯಜೀವಿ ತಜ್ಞ ಪ್ರವೀಣ್‌ ಭಾರ್ಗವ್‌ ಅಭಿಪ್ರಾಯಪಟ್ಟರು.

‘ತಪ್ಪಿಸಿಕೊಂಡ ಚಿರತೆಯನ್ನು ಕಂಡ ಕೂಡಲೇ ಜನರು ಭಯಭೀತರಾಗಬಾರದು. ಗುಂಪು ಸೇರಿ ಅದನ್ನು ಮತ್ತಷ್ಟು ಗಾಬರಿಪಡಿಸಬಾರದು. ಜನರು ಜಾಗರೂಕರಾಗಿರಬೇಕು. ಅದರ ಬಗ್ಗೆ ಸುಳಿವು ಸಿಕ್ಕರೆ ಅರಣ್ಯ ಇಲಾಖೆಗೆ ಸುಳಿವು ನೀಡಬೇಕು’ ಎಂದು ಅವರು ಹೇಳಿದರು.

‘ಚಿರತೆ 200– 300 ಕಿ.ಮೀ. ನಿರಂತರವಾಗಿ ಸಂಚಾರ ಮಾಡುವ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ಚಿರತೆ ದಾರಿ ತಪ್ಪಿ ಅಪರಿಚಿತ ಸ್ಥಾನಕ್ಕೆ ಹೋಯಿತು ಎಂದಿಟ್ಟುಕೊಳ್ಳಿ. ಅದು ಮತ್ತೆ ಮೂಲ ನೆಲೆಗೆ ಹೋಗಿಯೇ ಹೋಗುತ್ತದೆ. ಈ ಚಿರತೆ ಸಹ ವರ್ತೂರಿನ ವಿಬ್ಗಯೊರ್‌ ಶಾಲೆಗೆ ದಾರಿ ತಪ್ಪಿ ಬಂದಿದೆ. ಅದು ಮತ್ತೆ ಮೂಲ ನೆಲೆಯ ಕಡೆಗೆ ಹೋಗಿರುವ ಸಾಧ್ಯತೆಯೂ ಇದೆ’ ಎಂದು ಅವರು ವಿಶ್ಲೇಷಿಸಿದರು.

ವನ್ಯಜೀವಿ ತಜ್ಞ ಉಲ್ಲಾಸ ಕಾರಂತ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮೂಲ ನೆಲೆಗೆ ಹೋಗುತ್ತವೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಚಿರತೆಗೆ ಹೊಸ ಜಾಗದಲ್ಲಿ ಹೊಂದಿಕೊಳ್ಳಲು ಕಷ್ಟವಾಗಿದೆ’ ಎಂದು ವಿಶ್ಲೇಷಿಸಿದರು.

‘ಚಿರತೆ ದಿನಕ್ಕೆ 10ರಿಂದ 15 ಕಿ.ಮೀ. ದೂರ ಸಂಚಾರ ಮಾಡಬಲ್ಲದು’ ಎಂದರು.

‘ರಾಜ್ಯದಲ್ಲಿ ಚಿರತೆಗಳ ಆವಾಸಸ್ಥಾನ 80 ಸಾವಿರ ಚದರ ಕಿ.ಮೀ. ವರೆಗೆ ವ್ಯಾಪಿಸಿದೆ. ಅವುಗಳು ಕಾಡಂಚಿನಲ್ಲಿರುವ ಗ್ರಾಮಗಳಿಗೆ ಬರುವುದು ಸಾಮಾನ್ಯ. ನಾಯಿ ಮತ್ತಿತರ ಪ್ರಾಣಿಗಳನ್ನು ತಿಂದು ಬದುಕುತ್ತವೆ’ ಎಂದರು. ‘ಕೇಂದ್ರದಿಂದ 15 ದಿನಗಳ ಹಿಂದೆ ಹಿಮಾಲಯನ್‌ ಕರಡಿಯೊಂದು ತಪ್ಪಿಸಿಕೊಂಡಿತ್ತು. ಆಗಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಇಲ್ಲಿ ಉದ್ಯಾನದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ’ ಎಂದು ವನ್ಯಜೀವಿ ಮಂಡಳಿ ಸದಸ್ಯ ಜೋಸೆಫ್‌ ಹೂವರ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಣಿ ಪಾಲಕರು ಹೇಳುವುದು ಏನು? : ರಾತ್ರಿ ಪಾಳಿಯಲ್ಲಿದ್ದ ಪ್ರಾಣಿ ಪಾಲಕರಾದ ಕೃಷ್ಣಪ್ಪ, ಗಿರೀಶ್‌ ಹಾಗೂ ನಾಗರಾಜ್‌ ಶಾಸ್ತ್ರಿ ಅವರನ್ನು ರವಿ ರಾಲ್ಫ್‌ ಸೋಮವಾರ ವಿಚಾರಣೆ ನಡೆಸಿದರು. ಈ ಮೂವರೂ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 8 ಗಂಟೆಯ ವರೆಗೆ ಕರ್ತವ್ಯದಲ್ಲಿದ್ದರು.‘ಭಾನುವಾರ ಸಂಜೆ 6 ಗಂಟೆ ಹಾಗೂ ಸೋಮವಾರ ಬೆಳಿಗ್ಗೆ 4 ಗಂಟೆಯಲ್ಲಿ ಬೋನಿನ ಬಳಿ ಹೋಗಿ ನೋಡಿದ್ದೆ. ಆಗ ಚಿರತೆ ನಿದ್ದೆ ಮಾಡುತ್ತಿತ್ತು’ ಎಂದು ಗಿರೀಶ್‌ ತಿಳಿಸಿದರು.

‘ಅದು ಬೆಳಿಗ್ಗೆ 6.35ರ ಹೊತ್ತು. ಗಿರೀಶ್‌ ಅವರು ಜೋರಾಗಿ ಕೂಗಿಕೊಳ್ಳುವುದು ಕೇಳಿಸಿತು. ಕೂಡಲೇ ಸ್ಥಳಕ್ಕೆ ಧಾವಿಸಿದೆ. ಚಿರತೆ 20 ಅಡಿ ಎತ್ತರದ ಬೇಲಿಯನ್ನು ಜಿಗಿದು ಹೋಗುತ್ತಿರುವುದು ಕಂಡಿತು. ಅದು ಉದ್ಯಾನದ ಕಡೆಗೆ ಸಾಗಿತು’ ಎಂದು ನಾಗರಾಜ್‌ ಹೇಳಿದರು.

ಸಿಬ್ಬಂದಿಯ ಕೈವಾಡದ ಅನುಮಾನ
‘ಚಿರತೆ ಕಾಡಿನಿಂದ ಬಂದಿದೆ. ಈಗ ಅದು ಕಾಡಿಗೇ ಹೋಗಿದೆ. ಅದು ಉದ್ಯಾನದ ಕಾಡಿನಲ್ಲಿ ನಮಗೆ ಸಿಕ್ಕೇ ಸಿಗುತ್ತದೆ. ಆದರೆ, ಅದು ಬೋನಿನಿಂದ ಹೇಗೆ ತಪ್ಪಿಸಿಕೊಂಡಿತು ಎಂಬುದು ಯಕ್ಷ ಪ್ರಶ್ನೆ’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್‌ ಹೇಳಿದರು.

‘15 ದಿನಗಳ ಹಿಂದೆ ಹಿಮಾಲಯನ್‌ ಕರಡಿ ತಪ್ಪಿಸಿಕೊಂಡಿತ್ತು. ಆ ಪ್ರಕರಣದಲ್ಲಿ ಸಿಬ್ಬಂದಿಯ ತಪ್ಪು ಇರಲಿಲ್ಲ. ಆದರೆ, ಚಿರತೆ ಪ್ರಕರಣದಲ್ಲಿ ಕೆಲವು ಸಿಬ್ಬಂದಿಯ ಕೈವಾಡ ಇರುವ ಅನುಮಾನ ಇದೆ’ ಎಂದು ಅವರು ಶಂಕೆ ವ್ಯಕ್ತಪಡಿಸಿದರು. ‘ಹುಲಿಗಾಗಿ ಸಿದ್ಧಪಡಿಸಿದ ಮನೆಯಲ್ಲಿ ಚಿರತೆಯನ್ನು ಇಡಲಾಗಿತ್ತು. ಚಿರತೆ ಮನೆ ಹಾಗೂ ಹುಲಿ ಮನೆಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಹುಲಿ ಮನೆಯ ಮೇಲೆ ಶೀಟ್‌ ಹಾಕುವುದಿಲ್ಲ. ಆದರೆ, ಚಿರತೆ ಮನೆಯ ಮೇಲೆ ಶೀಟ್‌ ಹಾಕಲಾಗುತ್ತದೆ. ಹುಲಿ ಮನೆಯಲ್ಲಿ ಇಟ್ಟ ಕಾರಣಕ್ಕೆ ತಪ್ಪಿಸಿಕೊಂಡಿತು ಎಂಬ ಮಾತನ್ನು ಒಪ್ಪುವುದಿಲ್ಲ’ ಎಂದರು.

‘ಮನೆಯೊಳಗೆ ಮೂರು ಹಂತದ ರಕ್ಷಣಾ ಗೋಡೆ ಇದೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ಹೊರಗೆ ಹೇಗೆ ಬಂತು ಎಂಬುದೇ ಪ್ರಶ್ನೆ’ ಎಂದು ಅವರು ಹೇಳಿದರು. ‘ಸಿಬ್ಬಂದಿಯ ವಿಚಾರಣೆ ಆರಂಭವಾಗಿದೆ. ವಾರದಲ್ಲಿ ತನಿಖಾ ವರದಿ ಲಭ್ಯವಾಗಲಿದೆ’ ಎಂದು ಅವರು ಹೇಳಿದರು. ‘ಭವಿಷ್ಯದಲ್ಲಿ ಉದ್ಯಾನದಲ್ಲಿ ಇಂತಹ ಘಟನೆಗಳು ನಡೆಯದಂತೆ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ಅವರು ತಿಳಿಸಿದರು.

Write A Comment