ಕರ್ನಾಟಕ

ದೇವರ ಪಲ್ಲಕ್ಕಿ ಎದುರು ಕುಣಿಯುವಾಗ ಕಾಲು ತುಳಿದಿದ್ದಕ್ಕೆ ಯುವಕನ ಕೊಲೆ

Pinterest LinkedIn Tumblr

attack

ಬೆಂಗಳೂರು: ದೇವರ ಪಲ್ಲಕ್ಕಿ ಮೆರವಣಿಗೆ ಎದುರು ಕುಣಿಯುವಾಗ ಕಾಲು ತುಳಿದ ಎಂಬ ಕಾರಣಕ್ಕೆ ನಾಲ್ವರು ಯುವಕರ ಗುಂಪೊಂದು, ವೆಂಕಟೇಶ್‌ (19) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದೆ. ಆಡುಗೋಡಿಯ ಪಟಾಲಮ್ಮ ಬೀದಿಯಲ್ಲಿ ಸೋಮವಾರ ಘಟನೆ ನಡೆದಿದೆ.

ಈಜೀಪುರ ನಿವಾಸಿಯಾದ ವೆಂಕಟೇಶ್‌, ಬಿಪಿಒ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ರಥಸಪ್ತಮಿ ಅಂಗವಾಗಿ ಆಡುಗೋಡಿಯಲ್ಲಿ ಊರ ಜಾತ್ರೆ ನಡೆಯುತ್ತಿತ್ತು. ಹಾಗಾಗಿ, ರಾತ್ರಿ 1.30ರ ಸುಮಾರಿಗೆ ಗ್ರಾಮದ ದೇವರುಗಳನ್ನು ಪಲ್ಲಕ್ಕಿಯಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಗುತ್ತಿತ್ತು.

ಈ ವೇಳೆ ಪಲ್ಲಕ್ಕಿ ಎದುರು ತನ್ನಿಬ್ಬರು ಸ್ನೇಹಿತರೊಂದಿಗೆ ಕುಣಿಯುತ್ತಿದ್ದ ವೆಂಕಟೇಶ್, ಪಕ್ಕದಲ್ಲೇ ನರ್ತಿಸುತ್ತಿದ್ದ ಪಾನಮತ್ತ ನಾಲ್ವರು ಯುವಕರ ಗುಂಪಿನ ಪೈಕಿ ಒಬ್ಬನ ಕಾಲನ್ನು ಗೊತ್ತಾಗದೆ ತುಳಿದರು. ಇದೇ ವಿಷಯಕ್ಕೆ ಪರಸ್ಪರರ ಮಧ್ಯೆ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿತು. ಆಗ ಆ ಯುವಕರು ತಮ್ಮಲ್ಲಿದ್ದ ಚಾಕುವಿನಿಂದ ವೆಂಕಟೇಶ್ ಅವರ ತೊಡೆ ಮತ್ತು ಹೊಟ್ಟೆಯ ಭಾಗಕ್ಕೆ ಇರಿದರು. ಅಲ್ಲದೆ, ಸ್ನೇಹಿತನ ನೆರವಿಗೆ ಬಂದ ಪ್ರಶಾಂತ್ ಮತ್ತು ಲೂಯಿಸ್‌ ಮೇಲೂ ಹಲ್ಲೆ ನಡೆಸಿ ಪರಾರಿಯಾದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ನೇಹಿತರು ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಆಡುಗೋಡಿ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

Write A Comment