ಲಂಡನ್ (ಪಿಟಿಐ): ಎರಡನೇ ಪೋಪ್ ಜಾನ್ ಪಾಲ್ ಅವರು ವಿವಾಹಿತ ಪೋಲೆಂಡ್ ಮೂಲದ ಅಮೆರಿಕ ತತ್ವಜ್ಞಾನಿಯೊಂದಿಗೆ 30ಕ್ಕೂ ಹೆಚ್ಚು ವರ್ಷಗಳಿಂದ ಗಾಢ ಸಂಬಂಧ ಹೊಂದಿದ್ದರು ಎಂದು ಬಿಬಿಸಿ ಹೇಳಿದೆ.
ವಾಟಿಕನ್‌ನ ಮಾಜಿ ಧರ್ಮಗುರು ದಿವಂಗತ ಜಾನ್ ಪಾಲ್ ಅವರು ಅನ್ನಾ ತೆರೆಸಾ ಟೈಮೀನೈಇಕಾ ಅವರಿಗೆ ಬರೆದ ಪತ್ರಗಳನ್ನು ಬಿಬಿಸಿಯಲ್ಲಿ ಸೋಮವಾರ ಪ್ರಸಾರವಾದ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದ್ದು, ಪಾಲ್ ಅವರ ಇನ್ನೊಂದು ಬದುಕು ಅನಾವರಣಗೊಂಡಿದೆ.
2005ರಲ್ಲಿ ನಿಧನರಾದ ಜಾನ್ ಪಾಲ್ ಅವರ ಬ್ರಹ್ಮಚರ್ಯೆಕ್ಕೆ ತೊಂದರೆ ಆಗುವ ಯಾವುದೇ ಸೂಚನೆಗಳು ಪತ್ರದಲ್ಲಿಲ್ಲ, ಆದರೆ ಇಬ್ಬರ ಮಧ್ಯೆ ಭಾವನಾತ್ಮಕ ಮಾತುಕತೆ ನಡೆದ ಅಂಶಗಳಿವೆ ಎಂದು ಬಿಬಿಸಿ ತಿಳಿಸಿದೆ.
1973ರಲ್ಲೇ ಜಾನ್ ಪಾಲ್ ಮತ್ತು ಟೈಮೀನೈಇಕಾ ಅವರ ಮಧ್ಯೆ ಗೆಳೆತನ ಆರಂಭವಾಗಿತ್ತು ಎನ್ನುವುದು ಪತ್ರದಿಂದ ತಿಳಿದು ಬಂದಿದೆ.
(ಪ್ರಜಾವಾಣಿ)