ಕರ್ನಾಟಕ

ಘಟಿಕೋತ್ಸವಕ್ಕೆ ರೇಷ್ಮೆ ಸೀರೆ ಕೊಡಿಸಿ ಎಂದಿದ್ದ ಮಗಳ ನೆನೆದು ಕಣ್ಣೀರಿಟ್ಟ ತಂದೆ

Pinterest LinkedIn Tumblr

shruthiಬೆಂಗಳೂರು: “ಡ್ಯಾಡಿ, ಮಾರ್ಚ್ 19ಕ್ಕೆ ಕಾಲೇಜು ಘಟಿಕೋತ್ಸವ, ನನ್ನನ್ನೇ ಆ್ಯಂಕರಿಂಗ್ ಮಾಡಬೇಕೆಂದು ಹೇಳಿದ್ದಾರೆ, ಅದಕ್ಕೆ ನನಗೆ ಒಂದು ಮೈಸೂರು ಸಿಲ್ಕ್ ಸ್ಯಾರಿ ಕೊಡ್ಸು ಎಂದಿದ್ದಳು, ಆಯ್ತು ಬಾ ಮಗಳೇ ಎಂದಿದ್ದೇ…” ಎಂದು ಹೇಳಿ ಕಣ್ಣೀರಿಟ್ಟರು ಮಂಡ್ಯದ ವಿಸಿ ನಾಲೆಯಲ್ಲಿ ನೀರಿನ ಸೆಳೆತಕ್ಕೆ ಸಿಕ್ಕು ಸಾವನ್ನಪ್ಪಿದ್ದ ಶ್ರುತಿಯ ತಂದೆ ಎಲ್ ಗುರುಪ್ರಕಾಶ್.

ಮಧ್ಯಾಹ್ನ ಸುಮಾರು 1.30ಕ್ಕೆ ಕರೆ ಮಾಡಿದ ಮಗಳು, ಮಾರ್ಚ್ 19ಕ್ಕೆ ಕಾಲೇಜು ಘಟಿಕೋತ್ಸವ ಇರುವುದಾಗಿ ತಿಳಿಸಿ, ತನಗೆ ರೇಷ್ಮೆ ಸೀರೆ ಕೊಡಿಸಿ ಎಂದಿದ್ದಳು. ಸಂಜೆ ಮನೆಗೆ ಬರುವುದಾಗಿ ತಿಳಿಸಿದ್ದಳು. ಅವಳ ಬರುವಿಕೆಗಾಗಿ ಕಾಯುತ್ತಿದ್ದ ನಮಗೆ ಪೊಲೀಸರು ಕರೆ ಮಾಡಿ ಶ್ರುತಿ ನೀರಿನಲ್ಲಿ ಮುಳುಗಿ ಮೃತಪಟ್ಟ ವಿಷಯ ತಿಳಿಸಿದರು. ಆಗ ನಾನು ಕೆಳೆಗೇ ಕುಸಿದು ಬಿದ್ದೆ ಎಂದು ಶ್ರುತಿಯ ತಂದೆ ಕಣ್ಣೀರಿಟ್ಟಿದ್ದಾರೆ.

ಮಂಡ್ಯದ ವಿಸಿ ನಾಲೆಯಲ್ಲಿ ಫೆ.12ರಂದು ನೀರಿನ ಸೆಳೆತಕ್ಕೆ ಸಿಕ್ಕಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಅದರಲ್ಲಿ ಶ್ರುತಿಯೂ ಒಬ್ಬಳಾಗಿದ್ದಳು. “ಶ್ರುತಿಗೆ ಈಜಲು ಗೊತ್ತಿತ್ತು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದಿದ್ದಳು. ಅವಳು ಹೇಗೆ ನೀರಿನಲ್ಲಿ ಕೊಚ್ಚಿ ಹೋದಳು ಎಂಬುದು ಗೋತ್ತಾಗುತ್ತಿಲ್ಲ” ಎಂದು ಗುರುಪ್ರಕಾಶ್ ತಿಳಿಸಿದ್ದಾರೆ.

ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ ಶ್ರುತಿ, ಸಿಇಟಿಯಲ್ಲಿ ರ್ಯಾಂಕ್ ಪಡೆದಿದ್ದಳು. ನಾನು ಅವಿದ್ಯಾವಂತನಾಗಿದ್ದು, ಹೂವು ಮಾರಿ ನನ್ನ ಮಕ್ಕಳನ್ನು ಓದಿಸಿದ್ದೆ. ಶ್ರುತಿ 1ನೇ ತರಗತಿ ಓದುತ್ತಿರಬೇಕಾದರೆ, ಶಾಲೆಯ ಶುಲ್ಕ ಕಟ್ಟದೇ ಆಕೆಯನ್ನು ಕಳುಹಿಸಿಬಿಟ್ಟಿದ್ದರು, ಅವಳನ್ನು ತರಗತಿಯಿಂದ ಹೊರಗಡೆ ನಿಲ್ಲಿಸಿದ್ದರು, ಅದೇ ರೀತಿ 9 ತರಗತಿ ಓದಬೇಕಾದರೂ ಶುಲ್ಕ ಕಟ್ಟಿಲ್ಲ ಎಂದು ಶಾಲೆಯಿಂದ ಕಳುಹಿಸಿದ್ದರು. ಆದರೆ, ಎಂದಿಗೂ ಮಗಳು ನಮ್ಮನ್ನು ದೂಡಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ವಿಮಿಂಗ್ ನಲ್ಲಿ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಳು ಎಂದು ಗುರುಪ್ರಕಾಶ್ ದುಃಖತಪ್ತರಾದರು.

Write A Comment