ಕರ್ನಾಟಕ

ಇಂದು 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ

Pinterest LinkedIn Tumblr

vote_new_photo_1ಬೆಂಗಳೂರು, ಫೆ.12-ಆಡಳಿತ ಮತ್ತು ಪ್ರತಿ ಪಕ್ಷಗಳ ಪ್ರತಿಷ್ಠಯಾಗಿರುವ ಹೆಬ್ಬಾಳ ಸೇರಿದಂತೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಒಟ್ಟು 37 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು  ನಿರ್ಧರಿಸಲಿದ್ದಾರೆ. ಚುನಾಣಾಧಿಕಾರಿಗಳು ಉಪ ಚುನಾವಣೆಯನ್ನು ಶಾಂತಿಯುತ ಹಾಗೂ ಮುಕ್ತವಾಗಿ ನಡೆಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದ್ದಾರೆ. ಮತದಾನದ ವೇಳೆ ಸೂಕ್ತ ಭದ್ರತೆ ಒದಗಿಸಲು ಸ್ಥಳೀಯ ಪೊಲೀಸರ ಜತೆಗೆ ಅರೆ ಸೇನಾ ಪಡೆಗಳ ನೆರವನ್ನು ಕೂಡ ಪಡೆಯಲಾಗಿದೆ.

ಬೆಂಗಳೂರಿನ ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ವಿಧಾನ ಸಭಾ ಕ್ಷೇತ್ರಗಳಿಗೆ ಇಂದು  ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕೊನೆ ಕ್ಷಣದ ಪ್ರಯತ್ನ ಮಾಡುತ್ತಿದ್ದಾರೆ. ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ನ ಸಿ.ಕೆ.ರೆಹಮಾನ್ ಷರೀಫ್, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ ನಾನಾ ಸೇರಿದಂತೆ 22 ಅಭ್ಯರ್ಥಿಗಳು ಚುನಾಣಾ ಕಣದಲ್ಲಿದ್ದಾರೆ. ದೇವದುರ್ಗದಲ್ಲಿ ಬಿಜೆಪಿಯ ಕೆ.ಶಿವನಗೌಡ ನಾಯಕ್, ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ್, ಜೆಡಿಎಸ್‌ನ ಕರೆಮ್ಮ ಜಿ.ನಾಯಕ್ ಸೇರಿದಂತೆ ನಾಲ್ಕು ಮಂದಿ ಚುನಾವಣೆ ಸ್ಪರ್ಧೆಯಲ್ಲಿದ್ದಾರೆ.

ಬೀದರ್‌ನಲ್ಲಿ ಬಿಜೆಪಿಯ ಪ್ರಕಾಶ್ ಖಂಡ್ರೆ, ಕಾಂಗ್ರೆಸ್‌ನ ರಹೀಮ ಖಾನ, ಜೆಡಿಎಸ್‌ನ ಎಂ.ಡಿ.ಅಯಾಜ್ ಖಾನ ಸೇರಿದಂತೆ 11 ಮಂದಿ ಚುನಾಣಾ ಕಣದಲ್ಲಿದ್ದಾರೆ. ಚುನಾವಣಾ ಸಿಬ್ಬಂದಿ ಇಂದು ಆಯಾ ಕ್ಷೇತ್ರ ಮಸ್ಟರಿಂಗ್ ಕೇಂದ್ರಗಳಿಂದ ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ಜತೆಗೆ ಭದ್ರತಾ ಸಿಬ್ಬಂದಿಯೂ ಇಂದಿನಿಂದಲೇ ಮತಗಟ್ಟೆಗಳಿಗೆ ಭದ್ರತೆ ಒದಗಿಸಿದ್ದಾರೆ. ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸರ್ಕಾರ ವೇತನ ಸಹಿತ ರಜೆ ಘೋಷಣೆ ಮಾಡಿದೆ.

Write A Comment