ಚಿತ್ರದುರ್ಗ: ಸುಮಾರು 25 ವರ್ಷ ಕಳೆದರೂ ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕೋರ್ಟ್ ಹರಿಹರ, ಬೆಂಗಳೂರು ಪ್ಯಾಸೆಂಜರ್ ರೈಲನ್ನೇ ಜಪ್ತಿ ಮಾಡುವಂತೆ ಆದೇಶ ನೀಡಿರುವ ಘಟನೆ ನಡೆದಿದೆ.
ಏನಿದು ಪ್ರಕರಣ:
ಚಿತ್ರದುರ್ಗ ಮತ್ತು ರಾಯದುರ್ಗದ ನಡುವೆ ರೈಲು ಮಾರ್ಗ ನಿರ್ಮಾಣ ಮಾಡಲು ಸುಮಾರು 25 ವರ್ಷಗಳ ಹಿಂದೆ ರೈಲ್ವೆ ಇಲಾಖೆ ರೈತರಿಂದ ಜಮೀನು ಖರೀದಿಸಿತ್ತು. ಆದರೆ ಈವರೆಗೂ ಸುಮಾರು 50 ರೈತರಿಗೆ ಅಂದಾಜು ಒಂದು ಕೋಟಿ ರೂಪಾಯಿಯಷ್ಟು ಪರಿಹಾರವನ್ನು ನೀಡಿರಲಿಲ್ಲವಾಗಿತ್ತು. ಇದರಿಂದಾಗಿ ರೈತರು ಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಪ್ರಧಾನ ಮತ್ತು ಸತ್ರ ನ್ಯಾಯಾಲಯ ರೈಲನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಇಂದು ರೈಲನ್ನು ಜಪ್ತಿ ಮಾಡಲಾಗಿತ್ತು. ಅದರಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ರೈಲಿನಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ರೈತರ ಪರಿಹಾರ ಮೊತ್ತ ವಿತರಿಸಲು 45 ದಿನಗಳ ಕಾಲಾವಕಾಶ ನೀಡಬೇಕೆಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
-ಉದಯವಾಣಿ,