
ಬೆಂಗಳೂರು: ಚಾಲಾಕಿತನದಿಂದ ಟೆಕ್ಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಕೇವಲ 4 ನಿಮಿಷದಲ್ಲಿ 1 ಲಕ್ಷದ 20 ಸಾವಿರ ರೂಪಾಯಿ ದೋಚಿರುವ ಘಟನೆ ನಡೆದಿದೆ.
ಇನ್ಫೋಸಿಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಮೇಘ ಅವರು ಎಟಿಎಂನಿಂದ ಒಂದು ಸಲಕ್ಕೆ 60 ಸಾವಿರ ರೂಪಾಯಿ ಹಣ ತೆಗೆಯಬಹುದಿತ್ತು. ಅದರಂತೆ ವಂಚಕರು ಮಧ್ಯರಾತ್ರಿ ವೇಳೆ ಹಣವನ್ನು ದೋಚಿದ್ದರು. ಫೆಬ್ರವರಿ 1ರಂದು 11.58ಕ್ಕೆ ಮತ್ತು ಫೆಬ್ರವರಿ 2ರಂದು 12.02 ಕ್ಕೆ ಅಂದರೆ ಕೇವಲ 4 ನಿಮಿಷದಲ್ಲಿ ಮೇಘ ಅವರ ಮೊಬೈಲ್ ಗೆ ಸಂದೇಶ ಬಂದಾಗಲೇ ಅವರ ಖಾತೆಯಿಂದ ಹಣ ದೋಚಿದ್ದು ಗೊತ್ತಾಗಿದ್ದು.
ಘಟನೆ ಹಿನ್ನೆಲೆ: ಮೊನ್ನೆ ಜನವರಿ 31ರಂದು ಮೇಘ ಮತ್ತು ಟಿಸಿಎಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅವರ ಪತಿ ಅವರ ಸ್ವಂತ ಊರಾದ ಕುಂದಾಪುರದಿಂದ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ರಾತ್ರಿ 11.58ರ ಹೊತ್ತಿಗೆ ಅವರು ಬಸ್ಸಿನಲ್ಲಿ ಮಲಗಿದ್ದಾಗ 60 ಸಾವಿರ ರೂಪಾಯಿ ಅವರ ಖಾತೆಯಿಂದ ಎಟಿಎಂ ಮೂಲಕ ಪಡೆದಿದ್ದಾಗಿ ಮೊಬೈಲ್ ಗೆ ಸಂದೇಶ ಬಂದಿದೆ. ಆ ಹೊತ್ತಿಗೆ ಅವರು ಬಸ್ಸಿನಲ್ಲಿ ನಿದ್ದೆ ಮಾಡುತ್ತಿದ್ದರಿಂದ ಗೊತ್ತಾಗಲಿಲ್ಲ. ನಂತರ ಮಧ್ಯರಾತ್ರಿ 12 ಗಂಟೆ 2 ನಿಮಿಷಕ್ಕೆ ಮತ್ತೆ 60 ಸಾವಿರ ರೂಪಾಯಿ ನಗದು ಪಡೆಯಲಾಗಿದೆ ಎಂದು ಸಂದೇಶ ಬಂದಿದೆ. ಎರಡೂ ಸಲವೂ ಮಧ್ಯರಾತ್ರಿಗೆ ಎರಡು ನಿಮಿಷ ಆಚೀಚೆ ಆಗಿದ್ದರಿಂದ ದಿನಾಂಕ ಬೇರೆ ಬೇರೆಯಾಗಿದೆ. ಬೆಳಗ್ಗೆ ಎಚ್ಚರವಾಗಿ ಮೊಬೈಲ್ ನೋಡಿದಾಗಲೇ ಮೇಘ ಅವರಿಗೆ ವಿಷಯ ಗೊತ್ತಾಗಿದ್ದು.
ಗಾಬರಿಗೊಂಡು ದಂಪತಿ ಪೊಲೀಸ್ ಠಾಣೆಗೆ ಹೋದಾಗ ಸೈಬರ್ ಅಪರಾಧ ಠಾಣೆಗೆ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಅದರಂತೆ ಸೈಬರ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದಾರೆ.
”ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಐಸಿಐಸಿಐ ಬ್ಯಾಂಕಿನಲ್ಲಿ ಮೇಘ ಅವರ ವೇತನ ಖಾತೆಯಿಂದ ಹಣ ದೋಚಲಾಗಿದೆ. ಎಟಿಎಂ ಕಾರ್ಡು ಅವರ ಬಳಿಯೇ ಇದೆ. ಅವರು ಬೇರೆಲ್ಲಿಯೂ ಶಾಪಿಂಗ್ ಗೆ ಕಾರ್ಡು ಉಪಯೋಗಿಸಿಕೊಂಡಿಲ್ಲ. ಹಾಗಾಗಿ ದುಷ್ಕರ್ಮಿಗಳು ಹಣವನ್ನು ಹೇಗೆ ದೋಚಿರಬಹುದು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.