ತಿಪಟೂರು, ಫೆ.3-ಕೌಟುಂಬಿಕ ವಿಚಾರವಾಗಿ ಪತಿ-ಪತ್ನಿ ನಡುವೆ ವೈಮನಸ್ಸು ಉಂಟಾಗಿ ಪತ್ನಿ-ಮಗುವನ್ನು ಕೊಲೆ ಮಾಡಲು ಸಂಚು ರೂಪಿಸಿ ಕಲ್ಯಾಣಿಗೆ ಬೈಕ್ ನುಗ್ಗಿಸಿದಾಗ ಮಗು ಬದುಕುಳಿದು ದಂಪತಿ ಮೃತಪಟ್ಟಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉಮೇಶ್ (30) ಮತ್ತು ಕಾವ್ಯ (24) ಮೃತಪಟ್ಟ ದಂಪತಿ. ಕೊಬ್ಬರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಟಿಎಲ್ ಪಾಳ್ಯದಲ್ಲಿ ಪತ್ನಿ ಕಾವ್ಯ ಮತ್ತು ಮೂರು ವರ್ಷದ ಗಂಡು ಮಗುವಿನೊಂದಿಗೆ ವಾಸವಾಗಿದ್ದರು. ಕೆಲ ದಿನಗಳಿಂದ ಪತಿ-ಪತ್ನಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳವಾಗಿದೆ. ಈ ನಡುವೆ ಪತ್ನಿ-ಮಗುವನ್ನು ಕೊಲ್ಲಲು ಸಂಚು ರೂಪಿಸಿದ ಉಮೇಶ್ ದೇವಸ್ಥಾನಕ್ಕೆ ಹೋಗೋಣವೆಂದು ಹೇಳಿ ಪತ್ನಿ-ಮಗುವನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದಾನೆ.
ಗೊರಗೊಂಡನಹಳ್ಳಿಗೆ ಬರುವ ಮಾರ್ಗಮಧ್ಯೆಯಿರುವ ಕಲ್ಯಾಣಿಗೆ ಬೈಕ್ ನುಗ್ಗಿಸಿದ್ದಾನೆ. ಈ ವೇಳೆ ಮಗು ಜಾರಿ ಕಲ್ಯಾಣಿ ದಡದಲ್ಲಿ ಬಿದ್ದಿದೆ. ದಂಪತಿ ನೀರಿನಲ್ಲಿ ಬಿದ್ದಾಗ ಕಾವ್ಯ ನೀರಿನಲ್ಲಿ ಮುಳುಗುವ ಭಯದಲ್ಲಿ ಪತಿ ಉಮೇಶ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಇತ್ತ ದಡದಲ್ಲಿ ಬಿದ್ದ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ದಡದಲ್ಲಿದ್ದ ಮಗುವನ್ನು ರಕ್ಷಿಸಿ, ಈಜುಗಾರರ ನೆರವಿನೊಂದಿಗೆ ದಂಪತಿ ಶವವನ್ನು ಮೇಲೆತ್ತಿದ್ದಾರೆ.