ಬೆಂಗಳೂರು, ಫೆ.1- ನಗರದಲ್ಲಿ ನೀರಿನ ಸೋರಿಕೆ ಪ್ರಮಾಣವನ್ನು ಅಂತಾರಾಷ್ಟ್ರೀಯ ಮಾನದಂಡದಂತೆ ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮ ವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದರು. ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ನೀರು ಸಂರಕ್ಷಣೆ ಕುರಿತ ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶೇ.30ರಿಂದ 50ರಷ್ಟಿದ್ದ ನೀರಿನ ಅಪವ್ಯಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇದೀಗ ಶೇ.36ಕ್ಕೆ ಇಳಿದಿದೆ. ಇನ್ನೂ ಲೆಕ್ಕಕ್ಕೆ ಸಿಗದೆ ಸೋರಿಕೆಯಾಗುವ (ಪ್ಲಶ್, ಪೈಪ್ ಒಡೆಯುವಿಕೆ) ಸೋರಿಕೆಯಾಗುವ ಇನ್ನಿತರೆ ಅಪವ್ಯಯವನ್ನು ತಪ್ಪಿಸಬೇಕಿದೆ.
ಇದರ ಪ್ರಮಾಣ ಶೇ.8ರಿಂದ 10ರಷ್ಟಿದೆ ಎಂದು ಹೇಳಿದರು.ಈ ಸೋರಿಕೆಯನ್ನು ಸಹ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿಗರಿಗೆ ಸುಮಾರು 100 ಕಿ.ಮೀ. ದೂರದಿಂದ ಒಂದು ಸಾವಿರ ಅಡಿ ಎತ್ತರದಿಂದ 500 ಎಂಎಲ್‌ಡಿ ನೀರನ್ನು ಪ್ರತಿ ದಿನಕ್ಕೆ ಒದಗಿಸಲಾಗುತ್ತದೆ. ನಗರದಲ್ಲಿ 1.1ಮಿಲಿಯನ್ ಜನ ವಾಸಿಸುತ್ತಿದ್ದು, ಇವರೆಲ್ಲರಿಗೂ ನೀರಿನ ಪೂರೈಕೆ ಮಾಡಬೇಕಿದೆ. ಇದರೊಂದಿಗೆ ಅಷ್ಟೇ ವೇಗವಾಗಿ ನಗರ ಬೆಳೆಯುತ್ತಿರುವುದರಿಂದ ನೀರಿನ ಪೂರೈಕೆ ಕಷ್ಟವಾಗಿದೆ ಎಂದು ವಿವರಿಸಿದರು. ಈ ಎಲ್ಲ ಸಮಸ್ಯೆಗಳನ್ನು ಅವಲೋಕಿಸಿ ಬೆಂಗಳೂರಿನಲ್ಲೇ ಇರುವ ನೀರಿನ ಸೋರಿಕೆ ಪ್ರಮಾಣವನ್ನು ಅಂತಾರಾಷ್ಟ್ರೀಯ ಮಾನದಂಡದಂತೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದೇವೆ. ನಗರದಲ್ಲಿ ಒಳ್ಳೆಯ ಆರೋಗ್ಯ ಸೇವೆ, ಉತ್ತಮ ಸಂಸ್ಥೆಗಳು, ಐಟಿ-ಬಿಟಿಯಂತಹ ಕೇಂದ್ರಗಳು ಮುಂಚೂಣಿ ಸಾಧಿಸಿವೆ. ಎಲ್ಲದಕ್ಕೂ ನೀರಿನ ಅವಶ್ಯಕತೆ ಇದ್ದೇ ಇದೆ. ಈ ಹಿನ್ನೆಲೆಯಲ್ಲಿ ನೀರಿನ ರಕ್ಷಣೆಯೂ ಸಹ ನಮ್ಮ ಕರ್ತವ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಲಮಂಡಳಿಯ ಅಧ್ಯಕ್ಷರಾಗಿರುವ ವಿಜಯಭಾಸ್ಕರ್ ಅವರು ಗಂಭೀರ ಕ್ರಮಗಳನ್ನು ಕೈಗೊಂಡು ಸುಧಾರಣೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಕೆಲವೆಡೆ ಹಳೆಯ ಪೈಪ್‌ಗಳು ನೀರಿನ ಸೋರಿಕೆಗೆ ಕಾರಣವಾಗಿವೆ. ಇವುಗಳನ್ನು ಬದಲಿಸಲು ಆರ್ಥಿಕ ಸಂಪನ್ಮೂಲದ ಕೊರತೆ ಇದೆ. ಈ ಎಲ್ಲ ಸಮಸ್ಯೆಗಳ ನಿವಾರಹಣೆಗೆ ತನ್ನದೇ ಆದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದರು. ಅಂತಾರಾಷ್ಟ್ರೀಯ ನೀರು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಗರ್ ಬರ್‌ಕಾಪ್ ಮಾತನಾಡಿ, ನೀರು ನಿರ್ವಹಣೆ ಅತಿ ಮುಖ್ಯ. ನೈಸರ್ಗಿಕ ಸಂಪನ್ಮೂಲವಾದ ನೀರನ್ನು ಕೃತಕ ವಿಧಾನದಿಂದ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ನೀರಿನ ಬಳಕೆ ವೇಳೆ ಸೋರಿಕೆ ಮತ್ತಿತರ ಅಪವ್ಯಯವನ್ನು ತಪ್ಪಿಸಿ ಸದ್ಬಳಕೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು.
ಇಂತಹ ಕೆಲಸಗಳಿಗೆ ರಾಜಕೀಯ ಇಚ್ಚಾಸಕ್ತಿಯೂ ಇರಬೇಕು. ನೀರಿನ ಮಿತಿ ರೂಪಿಸಿ ಮಹಿಳೆಯರೂ, ಮಕ್ಕಳಿಗೆ ನೀರಿನ ಮಹತ್ವದ ಬಗ್ಗೆ ಹರಿವು ಮೂಡಿಸಬೇಕು. ಸಂಸ್ಕರಿಸಿದ ನೀರನ್ನೇ ಪುನರ್ ಬಳಕೆಗೆ ಬಳಸುವ ಮುಖಾಂತರವೂ ನೀರಿನ ಸದ್ಬಳಕೆ ಮಾಡುವ ಮೂಲಕ ನೀರನ್ನು ಉಳಿಸಬೇಕೆಂದು ತಿಳಿಸಿದರು. ಭಾರತೀಯ ಜಲ ಕಾಮಗಾರಿ ಸಂಸ್ಥೆಯ ಅಧ್ಯಕ್ಷ ಎಚ್.ಸಿ.ಲ್ಯಾಂಡ್ಗೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಜಿ.ಸಿ.ಚಂದ್ರಶೇಖರ್, ಬಿಡಬ್ಲ್ಯೂಎಸ್‌ಎಸ್‌ಬಿಯ ಮುಖ್ಯ ಎಂಜನೀಯರ್ ಕೃಷ್ಣಪ್ಪ, ಅಧಿಕಾರಿಗಳಾದ ಶ್ರೀನಿವಾಸರೆಡ್ಡಿ, ಜಗದೀಶ್ ಪಟ್ನಾಯ್ಕರ್ ಮತ್ತಿತರರು ಭಾಗವಹಿಸಿದ್ದರು.