ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹರಿಬಿಟ್ಟು ಮಾನ ಕಳೆಯುವುದಾಗಿ ಯುವತಿಯರಿಗೆ ಬ್ಲ್ಯಾಕ್ವೆುೕಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಫೇಸ್ಬುಕ್ ಸ್ನೇಹಿತನನ್ನು ಜೀವನ್ಬಿಮಾನಗರ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ಚೆನ್ನೈನ ಜೆ.ಪಿ. ನಾರಾಯಣ ಸ್ಟ್ರೀಟ್ನ ಹಮೀದ್ ಅಲಿ (23) ಬಂಧಿತ ಆರೋಪಿ. ವಾಹನ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ಉದ್ಯೋಗಿ ಯಾಗಿದ್ದ ಆರೋಪಿ 6 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಬೇರೆ ಉದ್ಯೋಗ ಹುಡುಕುತ್ತಿದ್ದ ಹಮೀದ್, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಇತ್ತೀಚೆಗೆ ಜೆ.ಬಿ. ನಗರದ ಬಿಎಸ್ಸಿ ಪದವೀಧರೆಗೆ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಯುವತಿ ಮನವಿ ಸ್ವೀಕರಿಸಿದ ಬಳಿಕ ಸಂದೇಶ ಕಳುಹಿಸಲು ಆರಂಭಿಸಿದ್ದ. ಕೆಲದಿನಗಳ ನಂತರ ಇಬ್ಬರೂ ಮೊಬೈಲ್ ನಂಬರ್ ಅನ್ನು ವಿನಿಮಯ ಮಾಡಿಕೊಂಡು ವಾಟ್ಸ್ಆಪ್ ಮೂಲಕ ಚಾಟ್ ಮಾಡುತ್ತಿದ್ದರು.
2 ತಿಂಗಳು ವಾಟ್ಸ್ಆಪ್ನಲ್ಲೇ ಪ್ರತಿನಿತ್ಯ ತಡರಾತ್ರಿವರೆಗೆ ಚಾಟ್ ಮಾಡುತ್ತಿದ್ದರು. ಏತನ್ಮಧ್ಯೆ ಆರೋಪಿ 20 ಸಾವಿರ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದ. ಆದರೆ, ಯುವತಿ ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಳು. ಈ ವೇಳೆ ಆರೋಪಿ ನನ್ನ ಬಳಿ ನಿನ್ನ ಬೆತ್ತಲೆ ಪೋಟೋಗಳಿವೆ. ಹಣ ಕೊಡದಿದ್ದರೆ ಫೇಸ್ಬುಕ್ಗೆ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದ. ಆದರೆ, ಯುವತಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಅಂತರ್ಜಾಲದಲ್ಲಿ ಯುವತಿಯರ ಬೆತ್ತಲೆ ಫೋಟೋಗಳನ್ನು ಡೌನ್ಲೋಡ್ ಮಾಡಿದ್ದ ಆರೋಪಿ ಮುಖವನ್ನು ಕತ್ತರಿಸಿ ಆ ಜಾಗಕ್ಕೆ ಫೇಸ್ಬುಕ್ ಖಾತೆಯಲ್ಲಿದ್ದ ಯುವತಿ ಫೋಟೋದ ಮುಖವನ್ನು ಅಂಟಿಸಿ ಫೇಸ್ಬುಕ್ಗೆ ಹಾಕಿದ್ದ. ಇದನ್ನು ನೋಡಿ ಭೀತಿಗೆ ಒಳಗಾದ ಯುವತಿ ಫೋಟೋ ತೆಗೆಯುವಂತೆ ಗೋಗರೆದಿದ್ದಳು. ಆಕೆಯಿಂದ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಹಾಕಿಸಿಕೊಂಡ ಬಳಿಕ ಆರೋಪಿ ಆ ಫೋಟೋಗಳನ್ನು ತೆಗೆದಿದ್ದ.
ಆದರೆ, ಸ್ವಲ್ಪ ದಿನದ ಬಳಿಕ ಮತ್ತೆ 20 ಸಾವಿರ ರೂ. ಕೊಡುವಂತೆ ಪೀಡಿಸತೊಡಗಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಯುವತಿ ಧೈರ್ಯ ಮಾಡಿ ಜೆ.ಬಿ. ನಗರ ಠಾಣೆಗೆ ದೂರು ನೀಡಿದ್ದಳು. ಆರೋಪಿ ಮೊಬೈಲ್ ಸಂಖ್ಯೆ ಪಡೆದ ಪೊಲೀಸರು ಕರೆಗಳ ವಿವರಗಳ ಆಧರಿಸಿ ಚೆನ್ನೈನಲ್ಲಿರುವುದನ್ನು ಪತ್ತೆಹಚ್ಚಿದ್ದರು. ಅಲ್ಲಿಗೆ ತೆರಳಿದ ಒಂದು ತಂಡ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.
ಹಲವರಿಗೆ ವಂಚಿಸಿರುವ ಶಂಕೆ
ಸದ್ಯ ಒಂದು ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆರೋಪಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪುನಃ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬನ್ನಂಜೆ ರಾಜ ಸಿಸಿಬಿ ಕಸ್ಟಡಿಗೆ
ಬೆಂಗಳೂರು: 1997ರಲ್ಲಿ ಬನಶಂಕರಿ ಸಮೀಪದ ಕದಿರೇನಹಳ್ಳಿ ಕ್ರಾಸ್ ಬಳಿ ನಡೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ ಅವರ ಕಾರು ಚಾಲಕ ಶ್ರೀನಿವಾಸ್ ಕೊಲೆ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಭೂಗತ ಪಾತಕಿ ಬನ್ನಂಜೆ ರಾಜನನ್ನು ಸಿಸಿಬಿ ಪೊಲೀಸರು ಹಿಂಡಲಗಾ ಜೈಲಿನಿಂದ ಬುಧವಾರ ನಗರಕ್ಕೆ ಕರೆತಂದರು.
ಸದ್ಯ ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಗುರುವಾರ ಬೆಳಗ್ಗೆ ಆತನನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು. ಬನ್ನಂಜೆ ವಿರುದ್ಧ ಕೊಲೆ, ಕೊಲೆಯತ್ನ, ಬೆದರಿಕೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ನಗರದ ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮೊದಲು ಸೀನನ ಕೊಲೆ ಪ್ರಕರಣದ ವಿಚಾರಣೆ ನಡೆಸಲಾಗುವುದೆಂದು ಸಿಸಿಬಿ ಡಿಸಿಪಿ ಜಿತೇಂದ್ರನಾಥ್ ತಿಳಿಸಿದರು.
1997ರ ಜು.1ರಂದು ಬನ್ನಂಜೆ ರಾಜ ಹಾಗೂ ಆತನ ಸಹಚರರು ಕದಿರೇನಹಳ್ಳಿ ಕ್ರಾಸ್ನಲ್ಲಿ ತೆರಳುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕಾರು ಚಲಾಯಿಸುತ್ತಿದ್ದ ಸೀನ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ. ಬಚ್ಚನ್ ಹಾಗೂ ಮೆಹಮೂದ್ಗೆ ಗುಂಡು ತಗುಲಿ ಗಾಯಗೊಂಡಿದ್ದರು. ಆ ಘಟನೆ ನಡೆದಾಗ ಬನ್ನಂಜೆ ರಾಜನ ಸುಳಿವು ಸಿಕ್ಕಿರಲಿಲ್ಲ. ಆದರೆ, ಹಂತಕರ ಕಾರು ಚಾಲಕ ಆರಿಫ್ 20 ದಿನಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ವಿಚಾರಣೆಯ ವೇಳೆ ಬನ್ನಂಜೆ ರಾಜನ ಕೃತ್ಯ ಬಯಲಾಗಿತ್ತು. ಬಂಧನದ ಭೀತಿಯಿಂದ ಬನ್ನಂಜೆ ರಾಜ ದುಬೈಗೆ ಪರಾರಿಯಾಗಿದ್ದ. 2015ರ ಫೆ.12ರಂದು ಮೊರಾಕ್ಕೊ ಪೊಲೀಸರ ಬಲೆಗೆ ಬಿದ್ದಿದ್ದ.
ನಗರದಲ್ಲಿ ನಡೆದ ಶ್ರೀನಿವಾಸ್ ಕೊಲೆ, ಟ್ರಾವೆಲ್ಸ್ ಏಜೆನ್ಸಿ ಮಾಲೀಕ ಉಪಾಧ್ಯಾಯ ಭಟ್ ಹತ್ಯೆ, ಉದ್ಯಮಿ ಸುಬ್ಬರಾಯ ನಾಯ್ಡು ಕೊಲೆ ಸೇರಿ ಹಲವು ಪ್ರಕರಣಗಳ ವಿಚಾರಣೆ ನಡೆಸಬೇಕಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.