ನವದೆಹಲಿ: ಪಾಸ್ಪೊರ್ಟ್ ಪಡೆಯಲು ಇನ್ನು ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಕೇವಲ ನಾಲ್ಕು ಅಧಿಕೃತ ದಾಖಲೆಗಳನ್ನು ಲಗತ್ತಿಸಿದರೆ ಪೊಲೀಸ್ ಪರಿಶೀಲನೆ ಇಲ್ಲದೆಯೆ ಪಾಸ್ಪೋರ್ಟ್ ದೊರಕಲಿದೆ. ಈ ಬಗ್ಗೆ ಸರ್ಕಾರದ ನಿಲುವನ್ನು ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸಾಮಾನ್ಯ ಜನರು ಪಾಸ್ಪೋರ್ಟ್ ಪಡೆಯಲು ಹೆಣಗಾಡುವುದನ್ನು ಮನಗಂಡು ಪಾಸ್ಪೊರ್ಟ್ಗೆ ಅರ್ಜಿ ಜತೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್ ಹಾಗೂ ಯಾವುದೇ ಅಪರಾಧ ಹಿನ್ನೆಲೆ ಇರದಿರುವ ಬಗ್ಗೆ ಕುಟುಂಬ ವಿವರದ ಅಫಡವಿಟ್ ಸಲ್ಲಿಸಿದರೆ ವಾರದಲ್ಲಿ ಪಾಸ್ಪೋರ್ಟ್ ನಿಮ್ಮ ಕೈಸೇರಲಿದೆ.
ಪಾಸ್ಪೊರ್ಟ್ ದೊರೆತ ಮೇಲೆ ವಿದೇಶ ಪ್ರಯಾಣಕ್ಕೆ ಮುಂದಾದರೆ ಆ ಸಮಯದಲ್ಲಿ ಪ್ರಯಾಣದ ದಾಖಲಾತಿ ಪರೀಕ್ಷೆಗೆ ಪೊಲೀಸ್ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಕಾರ್ಯಾಲಯ ತಿಳಿಸಿದೆ. ಅಂತರ್ಜಾಲದಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲಾತಿಗಳನ್ನು ಲಗತ್ತಿಸಿದರೆ ಒಂದು ವಾರದಲ್ಲಿ ಪಾಸ್ಪೊರ್ಟ್ ಪಡೆಯಬಹುದು.