ಕೊಳ್ಳೇಗಾಲ, ಜ.2- ಸೌಹಾರ್ದತೆಯ ಪ್ರತೀಕ ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರಿನಲ್ಲಿ ಕಳೆದ 3-4 ದಿನಗಳಿಂದ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಜಾತ್ರೆಗೆ ಮುತ್ತತ್ತಿರಾಯರ ಸೇವೆಯೊಡನೆ ಲಕ್ಷಾಂತರ ಭಕ್ತರ ನಿರಾಶೆಯ ನಡುವೆ ತೆರೆ ಬಿದ್ದಿದೆ. ಕಳೆದ 600 ವರ್ಷಗಳಿಂದ ಚಿಕ್ಕಲ್ಲೂರಿನಲ್ಲಿ ನಿರಂತರವಾಗಿ ಆಚರಿಸಿಕೊಂಡು ಬರುತ್ತಿದ್ದ ಧಾರ್ಮಿಕ ಆಚರಣೆ ಇದೇ ಪ್ರಥಮ ಭಾರಿಗೆ ನಿಶ್ಯಬ್ದಗೊಂಡಿದೆ. ಇದು ಲಕ್ಷಾಂತರ ಭಕ್ತರ ನಂಬಿಕೆಗೆ ತಣ್ಣೀರೆರಚಿದಂತಾಗಿದ್ದು ಲಕ್ಷಾಂತರ ಮಂದಿಯ ಧಾರ್ಮಿಕ ಭಾವನೆಗಳಿಗೆ ದಕ್ಕೆಯುಂಟ್ಟು ಮಾಡಿದೆ. 600 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಚಿಕ್ಕಲ್ಲೂರು ಜಾತ್ರೆ ತನ್ನದೆಯಾದ ವೈಶಿಷ್ಟ್ಯವನ್ನೆ ಹೊಂದಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರು ನಿರೀಕ್ಷಿಸುವುದು ಜಾತ್ರೆಯ 4 ನೇ ದಿನದಂದು ನಡೆಯುವ ಪಂಕ್ತಿ ಸೇವೆ ಅಥವಾ ಸಹಪಂಕ್ತಿ ಭೋಜನವನ್ನೇ.
ರಾಜ್ಯದ ಹಳೆ ಮೈಸೂರು ಭಾಗವಾದ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ರಾಮನಗರ ಹಾಗೂ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಟೇಸ್ವಾಮಿ ಪ್ರಭಾವಕ್ಕೊಳಗಾದ ಭಕ್ತರು ಕಡಿಮೆಯೇನಲ್ಲ. ತಳ ಸಮುದಾಯಗಳ ಜನರೇ ಹೆಚ್ಚಾಗಿ ಇಲ್ಲಿ ಭಾಗವಹಿಸುವುದರಿಂದ ಈ ಸಮುದಾಯಗಳ ಆಹಾರ ಪದ್ಧತಿಯೂ ಬಹುತೇಕವಾಗಿ ಮಾಂಸಹಾರವೇ ಆಗಿರುವುದರಿಂದ 5 ದಿನಗಳ ಕಾಲ ನಡೆಯುವ ಜಾತ್ರೆಯ ಒಂದು ದಿನ ಈ ಜನ ಮಾಂಸಹಾರವನ್ನು ತಯಾರಿಸುತ್ತಾರೆ. ಇದು ಈ ಸಮುದಾಯಗಳ ಆಹಾರ ಪದ್ದತಿಯನ್ನು ಸಾರುತ್ತದೆ. ರಾಜ್ಯದ ತಳ ಸಮೂದಾಯಗಳ ಸಂಸ್ಕೃತಿ ಆಚರಣೆ ಬಿಂಬಿಸುವ ಸಹಪಂಕ್ತಿ ಬೋಜನ ಈ ಜಾತ್ರೆಯ ವಿಶಿಷ್ಟ ಆಚರಣೆ.
ಇದೇ 24 ರ ಭಾನುವಾರ ರಾತ್ರಿ ಚಂದ್ರ ಮಂಡಲೋತ್ಸವದೊಡನೆ ಆರಂಭವಾದ ಜಾತ್ರೆಯಲ್ಲಿ ಜಿಲ್ಲಾಡಳಿತ ಪ್ರಾಣಿ ಬಲಿಯನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಚಿಕ್ಕಲ್ಲೂರು ಜಾತ್ರೆಯ ಪಂಕ್ತಿಸೇವೆಯಲ್ಲಿ ಪಾಲ್ಗೊಳ್ಳುವ ಉತ್ಸುಕತೆಯಲ್ಲಿ ಆಗಮಿಸಿದ್ದ ಲಕ್ಷಾಂತರ ಮಂದಿ ನಿರಾಶೆಯಿಂದ ಭಾರವಾದ ಮನಸ್ಸಿನಿಂದಲೆ ತಮ್ಮ-ತಮ್ಮ ಗ್ರಾಮಗಳಿಗೆ ತೆರಳ ಬೇಕಾಯಿತು. ಕೆಲವರು ಛಲ ಬಿಡದ ವಿಕ್ರಮನಂತೆ ಮಾಡಿಯೇ ತೀರುತ್ತೇವೆಂದು ಜಾತ್ರೆಯ ಸುತ್ತ-ಮುತ್ತ ಅವಕಾಶ ಕೊಡದಿದ್ದರೇನಂತೆ ಚಿಕ್ಕಲ್ಲೂರಿನಿಂದ ಬಹುದೂರದಲ್ಲಿ ಅಂದರೆ ಸುಮಾರು 4-5 ಕಿ.ಮೀ ದೂರದಲ್ಲಿ ಅಲ್ಲಲ್ಲಿ ಮಾರ್ಗ ಮಧ್ಯದಲ್ಲಿ ಸಿಗುವ ತೆಳ್ಳನೂರು, ಕೊತ್ತನೂರು, ಸುಂಡ್ರಳ್ಳಿ, ಬಾನೂರು, ಪ್ರಕಾಶಪಾಳ್ಯ, ಇಕ್ಕಡಹಳ್ಳಿ, ಮತ್ತಿಪುರ, ಪಾಳ್ಯ, ಜಿನಕನಹಳ್ಳಿ, ನರೀಪುರ, ಸರಗೂರು, ಧನಗೆರೆ, ಸತ್ತೇಗಾಲ ಗ್ರಾಮಗಳ ತೋಟಗಳಲ್ಲಿ ಅಡಿಗೆ ತಯಾರಿಸಿ ಸಹಪಂಕ್ತಿ ಬೋಜನ ಮಾಡಿದರೆ ಇನ್ನು ಕೆಲವರು ಸಮೀಪದ ಧಾರ್ಮಿಕ ಕ್ಷೇತ್ರ ಕುರುಬನಕಟ್ಟೆಯಲ್ಲಿ ತಾವು ತಂದಿದ್ದ ಕುರಿ ಮೇಕೆಗಳನ್ನು ಕಡಿದು ಮಾಂಸದೂಟ ತಯಾರಿಸಿ ಸಹಪಂಕ್ತಿ ಬೋಜನ ಮಾಡಿ ತಮ್ಮ ಹರಕೆ ತೀರಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.