ಬೆಂಗಳೂರು, ಜ. ೨೫- ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಹಿನ್ನಡೆ ಉಂಟಾದರೆ ಸಚಿವರ ತಲೆದಂಡ ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ನಡೆದ ಸಚಿವ ಸಂಪುಟದ ಸಭೆಗೆ ರಾಜ್ಯ ಸಚಿವರನ್ನು ಆಹ್ವಾನಿಸಿದ್ದ ಸಿದ್ದರಾಮಯ್ಯ ಯಾವುದೇ ಸಬೂಬು ನೀಡದೆ ಕಾಂಗ್ರೆಸ್ ಅಭ್ಯರ್ಥಿಗಳ ಜಯಕ್ಕೆ ಶ್ರಮಿಸಬೇಕೆಂದು ಹೇಳಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಗೆಲುವಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ಸ್ಪಷ್ಟ ಸಂದೇಶ ರವಾನಿಸಿದ್ದರು.
ಸಂಪುಟ ಸಭೆಯಲ್ಲಿ ಅಧಿಕೃತ ತೀರ್ಮಾನಗಳನ್ನು ಕೈಗೊಂಡ ನಂತರ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಚುನಾವಣಾ ಸಿದ್ದತೆಗಳು, ಗೆಲುವಿನ ತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಂಪುಟ ಸಭೆಯಲ್ಲಿ ಸಚಿವರುಗಳಿಗೆ ಕೆಲ ಕಿವಿಮಾತುಗಳನ್ನು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಗಳಲ್ಲಿ ಪ್ರತಿಯೊಬ್ಬ ಸಚಿವರು ಮನಸ್ಸಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಪಕ್ಷದ ಅಭ್ಯರ್ಥಿಗಳು ಸೋಲನುಭವಿಸದಂತೆ ನೋಡಿಕೊಳ್ಳಿ ಎಂದರು.
ಪ್ರತಿಯೊಬ್ಬ ಸಚಿವರುಗಳಿಗೂ ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಆ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹೊಣೆ ಆಯಾ ಜಿಲ್ಲೆಯ ಸಚಿವರದ್ದು. ಹಾಗಾಗಿ ಜವಾಬ್ದಾರಿಯಿಂದ ಕೆಲಸ ಮಾಡಿ ಎಂಬ ಖಡಕ್ ಮಾತುಗಳನ್ನು ಆಡಿದರು ಎಂದು ಮೂಲಗಳು ಹೇಳಿವೆ.
ಚುನಾವಣೆಯಲ್ಲಿ ವೇಳೆ ವ್ಯತಿರಿಕ್ತ ಫಲಿತಾಂಶಗಳು ಬಂದರೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳೆ ಹೊಣೆಗಾರರು. ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಇಂತಹ ಸಚಿವರನ್ನು ಕೈಬಿಡುವ ಇಂಗಿತವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ವಿವರಿಸಿವೆ.
ಸ್ಥಳೀಯ ಶಾಸಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ ಎಂಬ ಕಿವಿಮಾತನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.
ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಎಲ್ಲವನ್ನೂ ಸೂಕ್ತವಾಗಿ ನಿರ್ವಹಿಸಬೇಕು. ಗೊಂದಲಗಳು, ಅಡೆತಡೆಗಳು ಎದುರಾದರೆ ಅದನ್ನು ಪಕ್ಷದ ಅಧ್ಯಕ್ಷರು ಹಾಗೂ ತಮ್ಮ ಗಮನಕ್ಕೆ ತಂದು ಎಲ್ಲವನ್ನು ಪರಿಹರಿಸಿಕೊಳ್ಳುವಂತೆಯೂ ಮುಖ್ಯಮಂತ್ರಿಗಳು ಸಚಿವರುಗಳಿಗೆ ಸೂಚಿಸಿದರು ಎನ್ನಲಾಗಿದೆ.
ಪಂಚಾಯ್ತಿ ಚುನಾವಣೆಗಳು ಸರ್ಕಾರದ ಮೂರು ವರ್ಷಗಳ ಆಡಳಿತದ ಅಳತೆ ಗೋಲಾಗಿರುವುದರಿಂದ ಆದಷ್ಟು ಮುತುವರ್ಜಿ ವಹಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಇದನ್ನು ಅರ್ಥ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂಬ ಮಾತುಗಳನ್ನು ಮುಖ್ಯಮಂತ್ರಿಗಳು ಸಭೆಯಲ್ಲಿ ಆಡಿದರು ಎನ್ನಲಾಗಿದೆ.
ಕರ್ನಾಟಕ