ಬೆಂಗಳೂರು, ಜ. ೨೫- ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿರುವಾಗಲೇ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗೆ ಜಿದ್ದಾಜಿದ್ದಿಯೇ ನಡೆದಿದ್ದು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪ್ರಭಾವಿ ಮುಖಂಡರು ತಮ್ಮ ಸಂಬಂಧಿಕರಿಗೆ, ಆಪ್ತರಿಗೆ ಟಿಕೆಟ್ ಗಿಟ್ಟಿಸಲು ಲಾಭಿ ನಡೆಸಿದ್ದಾರೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸಂಸದರು, ಶಾಸಕರು, ಮಾಜಿ ಶಾಸಕರು ಯಾವುದಾದರೂ ಒಂದು ಕ್ಷೇತ್ರದಲ್ಲಿ ತಮ್ಮ ಪತ್ನಿ, ಪುತ್ರ, ಪುತ್ರಿ, ಅಳಿಯ, ಸೊಸೆ ಸೇರಿದಂತೆ ಸಂಬಂಧಿಕರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿರುವುದು ಗುಟ್ಟೇನಲ್ಲ.
ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಅಭ್ಯರ್ಥಿಗಳು ತಮ್ಮ ರಾಜಕೀಯ ಗಾಡ್ ಫಾದರ್‌ಗಳಿಗೆ ದುಂಬಾಲು ಬಿದ್ದಿದ್ದಾರೆ. ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಬೇರೆ ಪಕ್ಷಗಳಿಗಿಂತ ಟಿಕೆಟ್ ಗಿಟ್ಟಿಸಲು ಹೆಚ್ಚಿನ ಪೈಪೋಟಿ ಇದೆ.
ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ಪಂಚಾಯ್ತಿ ಚುನಾವಣೆ ಎಲ್ಲಾ ಪಕ್ಷಗಳಿಗೂ ಅತ್ಯಂತ ಮಹತ್ವದಾಗಿದ್ದು, ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಈ ಚುನಾವಣೆ ಬಿಂಬಿತವಾಗಿದೆ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ ಕುದುರೆಗಳಿಗಾಗಿ ಹುಡುಕಾಟ ನಡೆಸಿವೆ.
ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಿರುವ ರಾಜಕೀಯ ಪಕ್ಷಗಳು, ಸ್ಥಳೀಯ ಶಾಸಕರು, ಮಾಜಿ ಶಾಸಕರು, ಮುಖಂಡರ ಅಭಿಪ್ರಾಯ ಪಡೆದೇ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವ ತೀರ್ಮಾನ ಮಾಡಿದ್ದು, ಅದರಂತೆ ಪ್ರತಿ ಜಿಲ್ಲೆಗೂ ವೀಕ್ಷಕರನ್ನು ನೇಮಕ ಮಾಡಿ ವರದಿ ತರಿಸಿಕೊಂಡಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಸ್ಥಳೀಯ ಮುಖಂಡರೊಡನೆ ಸಮಾಲೋಚಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದ್ದು, 2-3 ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ.