ಬೆಂಗಳೂರು: ಆಗೊಮ್ಮೆ, ಈಗೊಮ್ಮೆ ಸುದ್ದಿಯಾಗುವ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಮೇಲ್ಮನೆಗೆ ರಮ್ಯಾ ಅವರನ್ನು ನಾಮ ನಿರ್ದೇಶನ ಮಾಡುವಂತೆ ಕೆಲ ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಕುರಿತು ಚರ್ಚೆ ನಡೆಸಲಾಯಿತು. ಇಬ್ಬರನ್ನು ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಅವಕಾಶವಿದ್ದು, ಯಾರನ್ನು ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಮತ್ತೆ ನಟಿ ರಮ್ಯಾ ಹೆಸರು ಕೇಳಿ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಕುಂದುತ್ತಿದೆ. ಇಂತಹ ಸಂದರ್ಭದಲ್ಲಿ ರಮ್ಯಾ ಅವರನ್ನು ಪರಿಷತ್‌ಗೆ ನಾಮಕರಣ ಮಾಡಿದರೆ ಪಕ್ಷಕ್ಕೆ ಲಾಭವಾಗಲಿದೆ. ಅಲ್ಲದೆ ಅವರು ಸಿನಿಮಾ ಹಿನ್ನೆಲೆ ಹೊಂದಿದ್ದು, ಕಲಾವಿದರು ಎನ್ನುವ ಕಾರಣದಿಂದ ನಾಮ ನಿರ್ದೇಶನ ಮಾಡಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಇನ್ನು ಕೆಲ ಸಚಿವರು ಒಪ್ಪಿಗೆ ಸೂಚಿಸಿದರೂ ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ. ಆದರೆ ಸಿಎಂ ಚಿತ್ತ ಮಾತ್ರ ದಲಿತ ಸಾಹಿತಿಗಳ ಪರ ಇದೆ ಎಂದು ತಿಳಿದು ಬಂದಿದೆ.
ಸದ್ಯ ನಟಿ ರಮ್ಯಾ ಹೆಸರು ಮಾತ್ರ ಸಂಪುಟ ಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಉಳಿದಂತೆ ದಲಿತ, ಬಂಡಾಯ ಸಾಹಿತಿಗಳು, ಕ್ರೀಡಾ ಸಾಧಕರ ಹೆಸರುಗಳು ಪ್ರಸ್ತಾಪವಾಗಲಿಲ್ಲ. ಹೀಗಾಗಿ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮ್ಯಯ ಅವರ ವಿವೇಚನೆಗೆ ಬಿಡಲು ಸಂಪುಟ ಸಭೆ ನಿರ್ಧಾರ ಕೈಗೊಂಡಿತು.