ಕರ್ನಾಟಕ

ಛಲ ಬಿಡದೆ ಕೊನೆಗೂ ವಿಧಾನಸೌಧ ಪ್ರವೇಶಿಸಿದ ಸ್ವಾತಂತ್ರ್ಯ ಹೋರಾಟಗಾರ ಉಮಾಪತಿ

Pinterest LinkedIn Tumblr

swatantraಬೆಂಗಳೂರು, ಜ.23-ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಪ್ರಜಾಪ್ರಭುತ್ವವಿರುವ ಇಂದಿನ ದಿನದಲ್ಲೂ ಕನಿಷ್ಠ ರಾಜ್ಯದ ಮುಖ್ಯಮಂತ್ರಿಗಳ ಭೇಟಿಗಾಗಿ ನ್ಯಾಯಾಲಯದ ಆದೇಶ ಪಡೆದ ವಿಲಕ್ಷಣ ಘಟನೆ ನಡೆದಿದೆ. ಮೂಲತಃ ತುಮಕೂರಿನವರಾದ ಉಮಾಪತಿ ಶಾಸ್ತ್ರಿ ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯರಾಗಿದ್ದಲ್ಲದೆ ದೆಹಲಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಸೂಚಿಸಿದಂತೆ ಕರ್ನಾಟಕ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಂದಾಳತ್ವ ವಹಿಸಿದ್ದರು. ತೀವ್ರ ಸಂಕಷ್ಟದಲ್ಲಿದ್ದ 92 ವರ್ಷದ ಉಮಾಪತಿ ಶಾಸ್ತ್ರಿಯವರು ಸತತವಾಗಿ ಹಲವಾರು ವರ್ಷಗಳಿಂದ ಮುಖ್ಯಮಂತ್ರಿಗಳ ಭೇಟಿ ಮಾಡಿ ತಮ್ಮ ಸಂಕಷ್ಟ ತೋಡಿಕೊಳ್ಳಲು ಯತ್ನಿಸಿದ್ದರೂ ಅವಕಾಶ ದೊರೆಯದೆ ಹತಾಶರಾಗಿದ್ದರು.

ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಇವರ ನೋವಿಗೆ ಸ್ಪಂದಿಸಿ ವಿಧಾನಸೌಧದ ಪ್ರವೇಶ ಕಲ್ಪಿಸಲು ಆದೇಶಿಸಿತು.

ಒಂದು ತಿಂಗಳು ಅಲೆದಾಡಿ ಅಧಿಕಾರಿಗಳಿಂದ ವಿಧಾನಸೌಧ ಪ್ರವೇಶಕ್ಕೆ ಪಾಸ್ ಪಡೆದು 8 ಬಾರಿ ವಿಧಾನ ಸೌಧಕ್ಕೆ ಹೋದರೂ ಮುಖ್ಯಮಂತ್ರಿಗಳ ಭೇಟಿಗೆ ಮಾತ್ರ ಅಧಿಕಾರಿಗಳಿಂದ ಅನುಮತಿ ಸಿಕ್ಕಿರಲಿಲ್ಲ.
ತಮ್ಮ ಸಮಸ್ಯೆ ಬಗೆಹರಿಯದ್ದರಿಂದ ಮತ್ತೆ ನ್ಯಾಯಾಲಯದ ಮೊರೆ ಹೋದರೂ ಅವರ ನೋವು ಕೇಳಿದ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೊಡಿಸುವ ಭರವಸೆ ನೀಡಿದರು. ಇಷ್ಟಾದರೂ ಭೇಟಿ ಸಾಧ್ಯವಾಗದೆ ತಮ್ಮ ಸಂಕಷ್ಟ ಬಗೆಹರಿಯದೆ ಹತಾಶೆಯಿಂದ ಆತ್ಮಹತ್ಯೆಯ ಆಲೋಚನೆಯಲ್ಲಿದ್ದಾಗ ಅದೃಷ್ಟವಶಾತ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಸಿಬ್ಬಂದಿ ಉಮಾಪತಿ ಅವರ ವಿಚಾರ ತಿಳಿದು, ಖುದ್ದಾಗಿ ಕರೆ ಮಾಡಿ ಮುಖ್ಯಮಂತ್ರಿಗಳ ಭೇಟಿಗೆ ಆಹ್ವಾನ ನೀಡಿದ್ದರು. ಅದರಂತೆ ಇಂದು ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದರು.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಉಮಾಪತಿ ಶಾಸ್ತ್ರಿಯವರು ತಮಗೊಂದು ಮನೆ, ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನ ಹಾಗೂ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇವರ ಕಷ್ಟ ಆಲಿಸಿದ ಮುಖ್ಯಮಂತ್ರಿಗಳು ಕೂಡಲೇ ಮನೆ ಮಂಜೂರಿಗೆ ಸೂಚನೆ ನೀಡಿದ್ದಾರೆ ಎಂದು ಸುದ್ದಿಗಾರರಿಗೆ ಉಮಾಪತಿ ಶಾಸ್ತ್ರಿ ತಿಳಿಸಿದರು. ಮುಖ್ಯಮಂತ್ರಿಗಳ ಭೇಟಿ ಸಮಾಧಾನ ತಂದಿದೆ. ಬೇಡಿಕೆ ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದರು. ಹಿಂದಿನ ಯಾವ ಮುಖ್ಯಮಂತ್ರಿಗಳು ಸಹ ತಮ್ಮ ಭೇಟಿಗೆ ಅವಕಾಶ ನೀಡಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಓದು, ಕೆಲಸ ಕಳೆದುಕೊಂಡೆ. ಮನೆ ಬಿಟ್ಟು, ಅಪ್ಪ-ಅಮ್ಮ-ಆಸ್ತಿ ಎಲ್ಲ ವನ್ನೂ ಕಳೆದುಕೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ಬದುಕು ತ್ತಿದ್ದೇನೆ ಎಂದು ಅಳಲು ತೋಡಿಕೊಂಡರು. ನೀವು ಮುಖ್ಯಮಂತ್ರಿಗಳಿಗೇನಾದರೂ ಸಲಹೆ ನೀಡಿದಿರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಜನಪರ ಆಡಳಿತ ನೀಡುತ್ತಿದ್ದೀರಿ. ನಿಮ್ಮನ್ನು ಸ್ಥಾನದಿಂದ ಕೆಳಕ್ಕಿಳಿಸುವ ಹುನ್ನಾರ ನಡೆದಿದೆ. ಹಾಗಾದರೆ ಕಾಂಗ್ರೆಸ್ ನಾಶವಾಗುತ್ತೆ ಎಂದು ಹೇಳಿದ್ದಾಗಿ ನುಡಿದರು.

Write A Comment