ಬೆಂಗಳೂರು,ಜ.21-ಪ್ರಸ್ತುತ ಸರ್ಕಾರದ ಕಳೆದ ಮೂರು ವರ್ಷದ ಅವಧಿಯಲ್ಲಿ ಎಲ್ಲ ನೀರಾವರಿ ಕಾಮಗಾರಿಗಳಿಗೆ ಒಟ್ಟು 20733 ಕೋಟಿ ರೂ.ಗಳನ್ನಿ ವಿನಿಯೋಗಿಸಲಾಗಿದ್ದು, ಸರಿ ಸುಮಾರು 4.28 ಲಕ್ಷ ಎಕರೆ ಜಮೀನಿಗೆ ನೀರನ್ನು ಒದಗಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ದಿಯಲ್ಲಿ ಜಲಸಂಪನ್ಮೂಲ ಇಲಾಖೆ ತನ್ನದೇ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದಿದ್ದಾರೆ. ಮುಖ್ಯಮಂತ್ರಿಗಳು ನೀರಾವರಿ ಕ್ಷೇತ್ರಕ್ಕೆ ವಾರ್ಷಿಕ 10,000 ಕೋಟಿ ನಿಗದಿ ಮಾಡುವುದಾಗಿ ಮತ್ತು ಐದು ವರ್ಷಗಳಲ್ಲಿ 50 ಸಾವಿರ ಕೋಟಿ ಒದಗಿಸುವುದಾಗಿ ಭರವಸೆ ನೀಡಿದಂತೆ ಪ್ರತಿ ವರ್ಷ 10 ಸಾವಿರ ರೂ. ಕೋಟಿಗಳಿಗಿಂತಲೂ ಹೆಚ್ಚು ಹಣವನ್ನು ಒದಗಿಸಲಾಗುತ್ತಿದ್ದು, ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಒಟ್ಟಾರೆ 33668 ಕೋಟಿ ರೂ. ಒದಗಿಸಲಾಗಿದೆ. ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆಯಡಿ 2013-14ನೇ ಸಾಲಿನಲ್ಲಿ 6730.28 ಕೋಟಿ ರೂ, 2014-15ನೇ ಸಾಲಿನಲ್ಲಿ 9820.69 ಕೋಟಿ ಹಾಗೂ 2015-16ನೇ ಡಿಸೆಂಬರ್ ಅಂತ್ಯದವರೆಗೆ 4202.00 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 11515 ಕೋಟಿ ರೂ. ಬೃಹತ್ ಮಧ್ಯಮ ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದ್ದು, ಇದರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ 4832 ಕೋಟಿ ರೂ., ಕರ್ನಾಟಕ ನೀರಾವರಿ ನಿಗಮಕ್ಕೆ 4225 ಕೋಟಿ ಹಾಗೂ ಕಾವೇರಿನೀರಾವರಿ ನಿಗಮಕ್ಕೆ 1831 ಕೋಟಿ ರೂ. ಒದಗಿಸಲಾಗಿದೆ. ಪ್ರಥಮ ಬಾರಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಆರ್ ಅಂಡ್ ಆರ್‌ಗೆ ಪ್ರತ್ಯೇಕವಾಗಿ 1500 ರೂ. ಕೋಟಿಯನ್ನು ಒದಗಿಸಲಾಗಿದೆ.
ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಡಿಸೆಂಬರ್-2015ರವರೆಗೆ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಒಟ್ಟು 15744.40 ಕೋಟಿ ರೂ. ಮತ್ತು 1,73,427 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ: ಕೃಷ್ಣಾ ಮೇಲ್ದಂಡೆ ಹಂತ-3ರ ಯೋಜನೆಗಳ ಕಾಮಗಾರಿಗೆ ಜನವರಿ 2012ರಲ್ಲಿ 17207 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಚಿಮ್ಮಲಗಿ, ಮುಳವಾಡ, ಮಲ್ಲಾಬಾದ್ ಹಾಗೂ ಗುತ್ತಿಬಸವಣ್ಣ ಮತ್ತು ರಾಂಪುರ ಏತನೀರಾವರಿ ವಿಸ್ತರಣೆ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ನಂತರ ಈ ಎಲ್ಲಾ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಕೊಪ್ಪಳ ಹಾಗೂ ಹೆರಕಲ್ ಏತ ನೀರಾವರಿ ಮತ್ತು ನಾರಾಯಪುರ ಬಲದಂಡೆ ವಿಸ್ತರಣೆ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಭೀಮಾ ಪ್ಲ್ಯಾಂಕ್ ಯೋಜನೆಯಡಿ ಕಾಲುವೆ ಜಾಲದ ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷ್ಣಾ ಮೇಲ್ದಂಡೆ ಹಂತ-3ರಡಿ ಒಟ್ಟು 7181.90 ಕೋಟಿ ರೂ.ಗಳ ಕಾಮಗಾರಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಬಾಗಲಕೋಟೆ ನವನಗರ ಯುನಿಟ್ 2ರಡಿ 550 ರೂ. ಕೋಟಿ ಮೊತ್ತದ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಭೂ ಸ್ವಾಧೀನ ಹಾಗೂ ಆರ್ ಅಂಡ್ ಆರ್ ಮತ್ತು ಬಿಟಿಡಿಎ ಕಾಮಗಾರಿಗಳಿಗಾಗಿ ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಇದುವರೆಗೂ 358.32 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಮಾರ್ಚ್ 2016ರ ಅಂತ್ಯದವರೆಗೆ ಸುಮಾರು 60000 ಎಕರೆ ಪ್ರದೇಶ ಭೂ ಸ್ವಾಧೀನ ಹಾಗೂ ಕಟ್ಟಡಗಳ ಸ್ವಾಧೀನ ಪ್ರಕ್ರಿಯೆಯೇ ಸುಮಾರು 800 ಕೋಟಿಗಳನ್ನು ವಿನಿಯೋಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಕರ್ನಾಟಕ ನೀರಾವರಿ ನಿಗಮ: ಕರ್ನಾಟಕ ನೀರಾವರಿ ನಿಗಮದಡಿಯಲ್ಲಿ ಕೃಷ್ಣಾ ಕೊಳ್ಳದಲ್ಲಿ ಪ್ರಸಕ್ತ ಸರ್ಕಾರದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಸಿಂಗಟಾಲೂರು ಏತ ನೀರಾವತಿ ಯೋಜನೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಕ್ರಮವಾಗಿ 2,25,515 ಹಾಗೂ 1,07380 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಪರಿಷ್ಕೃತ ವಿವರವಾದ ಯೋಜನಾ ವರದಿಗಳಿಗೆ ಕ್ರಮವಾಗಿ 12340 ರೂ. ಕೋಟಿ ಮತ್ತು 12340 ಕೋಟಿ ರೂ. ಮತ್ತು 5768 ಕೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಜಲ ಸಂಪತ್ತನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಮುಖ ಯೋಜನೆಗಳಲ್ಲಿ(ಕೊಪ್ಪಳ , ರಾಮಥಾಳ, ಭದ್ರಾಮೇಲ್ದಂಡೆ, ಸಿಂಗಟಾಲೂರು ಮುಂತಾದವುಗಳು) ಸೂಕ್ಷ್ಮ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡು ಸುಮಾರು 5 ಲಕ್ಷ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.