ಬೆಂಗಳೂರು, ಜ.21-ಗಣರಾಜ್ಯೋತ್ಸವದಲ್ಲಿ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಯನ್ನು ಉಡಾಯಿಸುವುದಾಗಿ ಐಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ.
ನಗರದ ಮೌಂಟ್‌ಕಾರ್ಮಲ್ ಕಾಲೇಜು ಸಮೀಪವಿರುವ ಫ್ರಾನ್ಸ್ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸುತ್ತೇವೆ ಎಂದು ಐಸಿಸ್ ಉಗ್ರರು ಉರ್ದು ಭಾಷೆಯಲ್ಲಿ ಬರೆದಿರುವ ಪತ್ರವನ್ನು ರಾಯಭಾರಿ ಕಚೇರಿಗೆ ರವಾನಿಸಿದ್ದಾರೆ. ಚೆನ್ನೈನಿಂದ ರವಾನಿಸಲಾಗಿರುವ ಬೆದರಿಕೆ ಪತ್ರ ರಾಯಭಾರಿ ಕಚೇರಿ ತಲುಪುತ್ತಿದ್ದಂತೆ ಅಲ್ಲಿನ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೆದರಿಕೆ ಹಿನ್ನೆಲೆಯಲ್ಲಿ ರಾಯಭಾರಿ ಕಚೇರಿಗೆ ಬಿಗಿ ಭದ್ರತೆ ಒದಗಿಸುವುದರ ಜೊತೆಗೆ ಉಗ್ರರ ಅಟ್ಟಹಾಸ ಮಟ್ಟ ಹಾಕಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಮೆಘರಿಕ್ ಭರವಸೆ ನೀಡಿದ್ದಾರೆ. ಪಠಾಣ್‌ಕೋಟ್ ವಾಯುನೆಲೆ ದಾಳಿ ನಂತರ ಭಾರತದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.