ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಗೆಳೆತನ ಬೆಳೆಸಿಕೊಂಡು ಭೇಟಿಯಾದ ಮೊದಲ ದಿನವೇ ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೊಂದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಹರಿಯಾಣದಲ್ಲಿ ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.
ಕುಸುಮ್ ಸಿಂಗ್ಲಾ ಎಂಬ 31ರ ಹರೆಯದ ಯುವತಿಯ ಶವ ನೈಋತ್ಯ ಬೆಂಗಳೂರಿನ ಆಕೆಯ ಫ್ಲ್ಯಾಟ್ನಲ್ಲಿ ಮಂಗಳವಾರ ಪತ್ತೆಯಾಗಿತ್ತು. ಆಕೆಯ ಜೊತೆಗೆ ಫ್ಲ್ಯಾಟಿನಲ್ಲಿ ವಾಸವಾಗಿದ್ದ ಗೆಳತಿ ಕೆಲಸ ಮುಗಿಸಿ ಬಂದಾಗ ಸಿಂಗ್ಲಾ ಶವ ಕಾಣಿಸಿತ್ತು. ಲ್ಯಾಪ್ಟಾಪ್ ವಯರನ್ನೇ ಕತ್ತಿಗೆ ಬಿಗಿದು ಕೊಲೆ ಮಾಡಲಾಗಿತ್ತು. 24 ಗಂಟೆಗಳ ಒಳಗಾಗಿ ಕೊಲೆಯ ನಿಗೂಢವನ್ನು ಭೇದಿಸಿರುವ ಪೊಲೀಸರು ಆರೋಪಿ ಸುಖ್ಬೀರ್ ಸಿಂಗ್ನನ್ನು ಹರಿಯಾಣದಲ್ಲಿ ಗುರುವಾರ ಮುಂಜಾನೆ ಬಂಧಿಸಿ ಬೆಂಗಳೂರಿಗೆ ಕರೆತಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ.
ಸಿಂಗ್ಲಾ ಮತ್ತು ಸುಖ್ಬೀರ್ ಸಿಂಗ್ ಸಾಮಾಜಿಕ ಮಾಧ್ಯಮ ಮೂಲಕ ಮೂರು ತಿಂಗಳ ಹಿಂದೆ ಗೆಳೆತನ ಮಾಡಿಕೊಂಡಿದ್ದರು. ಮಂಗಳವಾರ ಸಿಂಗ್ಲಾ ಆತನನ್ನು ತನ್ನ ಮನೆಗೆ ಆಮಂತ್ರಿಸಿದ್ದರು. ಆದರೆ ಆಕೆಯ ಮನೆಗೆ ಬಂದಾಗ ಹಣ ನೀಡುವಂತೆ ಆತ ಆಕೆಯನ್ನು ಆಗ್ರಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.