ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಗಳಿಗೆ ಚುನಾವಣಾ ಆಯೋಗ ಚುನಾವಣೆ ಪ್ರಕಟಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿ ಸಂಚಲನ ಉಂಟಾಗಿದೆ.
ಕ್ಷೇತ್ರಗಳ ಮೀಸಲಾತಿ ನಿಗದಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಅರ್ಜಿಗಳ ವಿಲೇವಾರಿ ತಡವಾಗಿ ಚುನಾವಣೆ ಘೋಷಣೆ ವಿಳಂಬವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರಾಜಕೀಯ ಪಕ್ಷಗಳಿಗೆ ನ್ಯಾಯಾಲಯದಲ್ಲಿ ಗ್ರೀನ್ ಸಿಗ್ನಲ್ ಪಡೆದು ಚುನಾವಣಾ ಆಯೋಗ ದಿಢೀರೆಂದು ಚುನಾವಣಾ ದಿನಾಂಕ ಘೋಷಣೆ ಮಾಡಿರುವುದು ರಾಜಕೀಯ ಪಕ್ಷಗಳಿಗೆ ತೂಕಡಿಕೆಯಿಂದ ಎದ್ದು ಕೂರುವಂತೆ ಮಾಡಿದೆ.
ಜಿದ್ದಾಜಿದ್ದಿಗೆ ಸಾಕ್ಷಿ
ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ರಾಜಕೀಯ ಪಕ್ಷಗಳಿಗೂ ಅತ್ಯಂತ ಮಹತ್ವದ ಚುನಾವಣೆಗಳಾಗಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಈ ಚುನಾವಣೆ ಸಾಕ್ಷಿಯಾಗಲಿದೆ.
ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಜತೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪಕ್ಷದ ಬಲ ಹಾಗೂ ಸಾಮರ್ಥ್ಯವನ್ನು ಓರೆಗಲ್ಲಿಗೆ ಹಚ್ಚುವ ಚುನಾವಣೆ ಇದಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಪಕ್ಷಗಳಲ್ಲಿ ರಾಜಕೀಯ ಜಿದ್ದಾಜಿದ್ದಿ ತಾರಕಕ್ಕೇರಲಿದೆ.
ಟಿಕೆಟ್‌ಗೆ ಲಾಬಿ
ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಫೆ. 13 ಹಾಗೂ 20 ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲು ಇನ್ನು 5 ದಿನ ಮಾತ್ರ ಉಳಿದಿದೆ. ಟಿಕೆಟ್‌ಗಾಗಿ ಆಕಾಂಕ್ಷಿಗಳ ತಯಾರಿ ಕೂಡ ಜೋರಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಎಚ್ಚರಿಕೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆ ರಾಜಕೀಯ ಪಕ್ಷಗಳಿಗೆ ತಲೆನೋವಾಗಿದೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲೂ ಟಿಕೆಟ್‌ಗಾಗಿ ಪೈಪೋಟಿಯೇ ನಡೆದಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್‌ಗೆ ಪೈಪೋಟಿ ಸ್ವಲ್ಪ ಹೆಚ್ಚೆ ಎನ್ನಬಹುದು.
ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ತಮ್ಮ ಗಾಡ್‌ಫಾದರ್‌ಗಳ ಮೂಲಕ ಟಿಕೆಟ್ ಗಿಟ್ಟಿಸಲು ಪ್ರಯತ್ನ ನಡೆಸಿರುವುದು ಗುಟ್ಟೇನಲ್ಲ.
ಪ್ರತಿ ಕ್ಷೇತ್ರಕ್ಕೂ ಇಬ್ಬರು-ಮೂವರು ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿರುವುದು ಪಕ್ಷದ ಮುಖಂಡರಿಗೆ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.
ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ಆಗಿರುವ ಹಾಗೂ ಸ್ಥಳೀಯ ಮುಖಂಡರ, ಶಾಸಕರ ಮಾತುಗಳನ್ನು ಗಣನೆಗೆ ತೆಗೆದುಕೊಂಡು ಅಭ್ಯರ್ಥಿಗಳ ಆಯ್ಕೆಗೆ ಮುಖಂಡರು ಗಮನ ನೀಡಿದ್ದಾರೆ.
ಪ್ರಣಾಳಿಕೆ ಸಿದ್ದತೆ
ಅಭ್ಯರ್ಥಿಗಳ ಆಯ್ಕೆ ಜತೆಗೆ ಚುನಾವಣಾ ಪ್ರಣಾಳಿಕೆ ಸಿದ್ದತೆಗೂ ರಾಜಕೀಯ ಪಕ್ಷಗಳು ಗಮನ ಹರಿಸಿವೆ. ಬಿಜೆಪಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಣಾಳಿಕೆ ಪ್ರಕಟಿಸುವುದಾಗಿ ಹೇಳಿದೆ.
ಎರಡು ಹಂತಗಳಲ್ಲಿ ನಡೆಯುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಯ ಮೊದಲ ಹಂತದ ಚುನಾವಣೆ ಫೆ. 13 ರಂದು ನಡೆಯಲಿದ್ದು, ಮೊದಲ ಹಂತಕ್ಕೆ ಜ. 25 ರಂದು ಅಧಿಸೂಚನೆ ಹೊರಬಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಫೆ. 1 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
2ನೇ ಹಂತದ ಚುನಾವಣೆ ಫೆ. 20 ರಂದು ನಡೆಯಲಿದ್ದು, ಈ 2ನೇ ಹಂತದ ಚುನಾವಣೆಗೆ ಫೆ. 1 ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆ. 8ರ ವರೆಗೂ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದು.
ಈ ಎರಡು ಹಂತಗಳ ಚುನಾವಣೆಯ ಮತ ಎಣಿಕೆ ಫೆ. 23 ರಂದು ನಡೆಯಲಿದೆ.
ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ 25 ಜಿಲ್ಲಾ ಪಂಚಾಯ್ತಿಯ 898 ಕ್ಷೇತ್ರಗಳಿಗೆ ಹಾಗೂ 175 ತಾಲೂಕು ಪಂಚಾಯ್ತಿಯ 3884 ಕ್ಷೇತ್ರಗಳಿಗೆ ಈ ಚುನಾವಣೆ ನಡೆಯಲಿದೆ.
ಕರ್ನಾಟಕ