ಹುಬ್ಬಳ್ಳಿ,ಜ.19- ಜಂಟಿ ಕಾರ್ಯಾಚರಣೆ ನಡೆಸಿದ ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಮೌಲ್ಯದ ಕೃಷ್ಣಮೃಗದ 5 ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಚಿಕ್ಕೇರಿ ಗ್ರಾಮದ ಬಸವರಾಜ್, ಯಲ್ಲಪ್ಪ ಕಾಮನಹಳ್ಳಿ ಹಾಗೂ ಕೊಪ್ಪಳ ನಗರದ ಶಂಕ್ರಪ್ಪ, ಹನುಮಂತಪ್ಪ, ದೊಡ್ಡಮನಿ ಬಂಧಿತ ವ್ಯಕ್ತಿಗಳು. ಖಚಿತ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಪಾದ ಜಿಲ್ಲೆ ಹಾಗೂ ಅರಣ್ಯಾಧಿಕಾರಿ ಶ್ರೀ ಶೈಲ ಗಾದಿ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಕೃಷ್ಣಮೃಗ ಚರ್ಮ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೃಷ್ಣಮೃಗ ಬೇಟೆಯಾಡಿ ಚರ್ಮ ಮಾರುತ್ತಿದ್ದಕೋ ಅಥವಾ ಬೇರೆಯವರಿಂದ ಅವುಗಳನ್ನು ಪಡೆದಿದ್ದರೋ ಎಂಬ ಬಗ್ಗೆ ತನಿಖೆಯಿಂದಷ್ಟೇ ತಿಳಿದುಬರಲಿದೆ. ಅರಣ್ಯ ಇಲಾಖೆ ಕಾಯ್ದೆಯಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.