ಕರ್ನಾಟಕ

ಆಡಲು ಹೋಗಿ ಹೂಳುತುಂಬಿದ್ದ ಕೆರೆಯಲ್ಲಿ ಹೂತುಹೋದ ಮೂವರು ಬಾಲಕರು

Pinterest LinkedIn Tumblr

sportsಮಾಗಡಿ, ಜ.15-ಹೂಳು, ಕಸ, ಪಾಚಿ ತುಂಬಿದ್ದ ಕೆರೆ ಬಳಿ ಆಟವಾಡಲು ತೆರಳಿದ್ದ ಮೂವರು ಬಾಲಕರು ಆಕಸ್ಮಿವಾಗಿ ಅದರಲ್ಲಿ ಕಾಲಿಟ್ಟು ಹೂತುಕೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರ ಶವಗಳನ್ನು ಹೊರ ತೆಗೆಯಲಾಗಿದೆ.

ಸಾದಿಕ್(7), ಲೋಕೇಶ್(10), ಕೇಶವಮೂರ್ತಿ(7) ಮೃತಪಟ್ಟ ದುರ್ದೈವಿ ಬಾಲಕರು. ನಿನ್ನೆ ಸಂಜೆ 4 ಗಂಟೆಯಲ್ಲಿ ಶಾಲೆಯಿಂದ ಮನೆಗೆ ಬಂದ ಈ ಬಾಲಕರು 4.30ರಲ್ಲಿ ಆಟವಾಡಲು ಒಟ್ಟಾಗಿ ಹೊರಗೆ ತೆರಳಿದ್ದಾರೆ. ಆಟವಾಡುತ್ತಾ ಕೆರೆಬಳಿ ಹೋದ ಇವರು ಆಕಸ್ಮಿವಾಗಿ ಹೂಳುತುಂಬಿಕೊಂಡಿದ್ದ ಕೊಚ್ಚೆಯಲ್ಲಿ ಹೂತುಕೊಂಡು ಸಾವನ್ನಪ್ಪಿದ್ದಾರೆ. ಸಂಜೆ 6 ಗಂಟೆಯಾದರೂ ಮಕ್ಕಳು ಮನೆಗೆ ಬಾರದಿರುವುದನ್ನು ಗಮನಿಸಿದ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಹುಡುಕಾಟದ ವೇಳೆ ಈ ಮೂವರು ಬಾಲಕರು ಕೆರೆ ಬಳಿ ಆಟವಾಡುತಿದುದ್ದನ್ನು ಗಮನಿಸಿದ ದನಗಾಯಿಗಳು ಮಕ್ಕಳ ಪೋಷಕರಿಗೆ ತಿಳಿಸಿದ್ದಾರೆ.

ತಕ್ಷಣ ಪೋಷಕರು ಕೆರೆ ಬಳಿ ಹೋಗಿ ನೋಡಿದಾಗ ಮಕ್ಕಳ ಸುಳಿವು ಸಿಗಲಿಲ್ಲ. ಮಕ್ಕಳು ಕೆರೆಯಲ್ಲಿ ಹೂತು ಮೃತಪಟ್ಟಿರಬಹುದೇ ಎಂಬ ಅನುಮಾನದಿಂದ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಕೆರೆಯಲ್ಲಿ ತುಂಬಿದ್ದ ಹೂಳು, ಬಳ್ಳಿಗಳನ್ನು ಸರಿಸಿ ಶವಗಳಿಗಾಗಿ ಹುಡುಕಾಟ ನಡೆಸಿದಾಗ ಸಾಧಿಕ್‌ನ ಶವ ಸಿಕ್ಕಿದೆ. ಶವ ಕಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಸಾಧಿಕ್ ಶವ ಸಿಗುತ್ತಿದ್ದಂತೆ ಲೋಕೇಶ್ ಹಾಗೂ ಕೇಶವಕುಮಾರ್‌ಯಾದವ್ ಪೋಷಕರ ಆತಂಕ ಹೆಚ್ಚಾಗಿ ರೋಧಿಸುತ್ತಿದ್ದ ದೃಶ್ಯ ನೆರೆದಿದ್ದವರ ಮನಕಲಕುವಂತಿತ್ತು. ಈ ಮೂವರು ಮಕ್ಕಳ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ರಾತ್ರಿ 7 ಗಂಟೆವರೆಗೂ ಇನ್ನಿಬ್ಬರ ಶವಗಳಿಗಾಗಿ ಹುಡುಕಾಟ ನಡೆಸಿದರಾದರೂ ಪತ್ತೆಯಾಗಲಿಲ್ಲ. ಕತ್ತಲಾದ್ದರಿಂದ ರಾತ್ರಿ ಕಾರ್ಯಚರಣೆ ಸ್ಥಗಿತಗೊಳಿಸಿ  ಇಂದು ಮುಂಜಾನೆಯಿಂದಲೇ ಶೋಧಕಾರ್ಯ ಮುಂದುವರೆಸಿದಾಗ 10 ಗಂಟೆ ಸಂದರ್ಭದಲ್ಲಿ ಇಬ್ಬರ ಶವಗಳು ಸಿಕ್ಕಿವೆ. ಮೂವರು ಮಕ್ಕಳು ಕೆರೆಯಲ್ಲಿ ಹೂತುಕೊಂಡು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರು ಕೆರೆ ಬಳಿ ದೌಡಾಯಿಸಿದ್ದರು. ಕೆಲವರು ಪೊಲೀಸರೊಂದಿಗೆ  ಶವಗಳನ್ನು ಹೊರ ತೆಗೆಯಲು ಸಹಕರಿಸಿದರು.

ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Write A Comment