ಬೆಂಗಳೂರು, ಜ.15- ಕರ್ನಾಟಕದಲ್ಲಿ 390 ಪ್ರವಾಸಿ ತಾಣಗಳಿದ್ದು ಇವುಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು 300 ಕೋಟಿ ರೂ.ವೆಚ್ಚ ಮಾಡಲಾಗಿದೆ. ಇಲ್ಲಿ ಮೂಲ ಸೌಲಭ್ಯ, ಶುಚಿತ್ವ, ಸುರಕ್ಷತೆಗಾಗಿ ಇನ್ನಷ್ಟು ಅನುದಾನ ನೀಡಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಜೆ.ಪಿನಗರ ಏಳನೇ ಹಂತದಲ್ಲಿರುವ ಈಲಾನ್ ಕನ್ವೆಂನ್ಷನ್ ಸೆಂಟರ್‌ನಲ್ಲಿ ಏರ್ಪಡಿಸಿರುವ ಮೂರು ದಿನಗಳ ಪ್ರವಾಸೋದ್ಯಮ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪ್ರವಾಸೋದ್ಯಮದಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಸರ್ಕಾರಕ್ಕೆ ಆದಾಯವೂ ಹೆಚ್ಚಾಗುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿಲ್ಲ ಎಂದು ಹೇಳಿದರು.
ಥೈಲ್ಯಾಂಡ್, ಮಲೇಷಿಯಾ, ಸಿಂಗಾಪೂರ್, ಕಾಂಬೋಡಿಯಾ ದೇಶಗಳು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟು ಲಾಭಗಳಿಸುತ್ತವೆ. ನಮ್ಮಲ್ಲಿ ವಿಫುಲ ಅವಕಾಶ ಇದ್ದರೂ ನಾವು ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ಹಾಗಾಗಿ ಪ್ರವಾಸೋದ್ಯಮ ಹೆಚ್ಚು ಅಭಿವೃದ್ದಿಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕದ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಮಾನದಂಡಕ್ಕೆ ರೇಟಿಂಗ್ ಕೊಡಲು ಖಾಸಗಿ ಏಜೆನ್ಸಿಗಳಿಗೆ ಸೂಚನೆ ನೀಡಿದ್ದೇವೆ. ಈ ಸಂಸ್ಥೆಗಳು ಅಲ್ಲಿನ ಸೌಕರ್ಯಗಳು, ವಸತಿ ಸೌಲಭ್ಯಗಳ ಬಗ್ಗೆ ಅಧ್ಯಯನ ಮಾಡಿ ರೇಟಿಂಗ್ ಕೊಡುತ್ತವೆ. ಯಾವ ಪ್ರವಾಸೋದ್ಯಮ ಸ್ಥಳದಲ್ಲಿ ಕೊರತೆ ಇದೆಯೋ ಅಂತಹ ಕಡೆ ಎಲ್ಲಾ ಸೌಲಭ್ಯ ಕಲ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ಮಿತ್ರ ಯೋಜನೆ ಜಾರಿಯಲ್ಲಿದೆ. 175 ಜನ ಗೃಹರಕ್ಷಕ ದಳದವರಿಗೆ ತರಬೇತಿ ನೀಡಿ ನಿಯೋಜನೆ ಮಾಡಲಾಗಿದೆ. ಇನ್ನೂ 250 ಮಂದಿಯನ್ನು ತರಬೇತಿ ನೀಡಿ ನೇಮಿಸಲಾಗುತ್ತದೆ, ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಪ್ರವಾಸೀ ತಾಣಗಳು ಮತ್ತಿತರ ವಿಷಯಗಳ ಬಗ್ಗೆ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 220 ಕಿ.ಮೀ.ಕರಾವಳಿ ತೀರ ಇದೆ. 44 ಬಂದರುಗಳಿವೆ, 6 ದ್ವೀಪಗಳಿವೆ. ಆದರೆ, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಸಿಆರ್‌ಜೆಡ್ ನಿಯಮಾವಳಿಗಳು ಇದಕ್ಕೆ ಅಡ್ಡಿಯಾಗಿವೆ. ಈ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಇದಕ್ಕೆ ಒಪ್ಪಿದ್ದಾರೆ. ಶೀಘ್ರದಲ್ಲೇ ನಿಯಮಾವಳಿಗಳು ಸಡಿಲಗೊಂಡು ಈ ಭಾಗದ ಪ್ರವಾಸಿ ತಾಣಗಳು ಇನ್ನೂ ಹೆಚ್ಚು ಅಭಿವೃದ್ಧಿಯಾಗಲಿವೆ ಎಂದು ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಟಿಟಿಎಫ್ ಅಧ್ಯಕ್ಷ ಹುಸೇನ್ ಮತ್ತಿತರರು ಪಾಲ್ಗೊಂಡಿದ್ದರು.