ಅಂತರಾಷ್ಟ್ರೀಯ

ಉಗ್ರ ಮಸೂದ್ ಅರೆಸ್ಟ್ ಡ್ರಾಮಾ

Pinterest LinkedIn Tumblr

ugraನವದೆಹಲಿ/ಇಸ್ಲಾಮಾಬಾದ್: ಪಠಾಣ್​ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಜೈಷ್ ಎ ಮೊಹಮ್ಮದ್ ಸಂಘಟನೆಯ ಕಚೇರಿಗಳ ಮೇಲೆ ದಾಳಿ ನಡೆಸಿ 12ಕ್ಕೂ ಹೆಚ್ಚು ಉಗ್ರರನ್ನು ಬಂಧಿಸಿದ್ದ ಪಾಕಿಸ್ತಾನ ಬೆಳಕು ಹರಿಯುವುದರೊಳಗೆ ಬಣ್ಣ ಬದಲಿಸಿದೆ. ಜೈಷ್ ಮುಖ್ಯಸ್ಥ ಮಸೂದ್ ಅಜರ್ ಬಂಧನವನ್ನು ಪಾಕ್ ಮಾಧ್ಯಮಗಳು ದೃಢೀಕರಿಸಿದ ನಂತರವೂ ಈ ವಿಚಾರದ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದು ಹೊಸ ನಾಟಕ ಆರಂಭಿಸಿದೆ.

ಪಠಾಣ್​ಕೋಟ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆಯಾದರೂ ಪಾಕಿಸ್ತಾನದ ತನಿಖಾ ತಂಡ ಪಠಾಣ್​ಕೋಟ್​ಗೆ ಭೇಟಿಕೊಟ್ಟ ಬಳಿಕವಷ್ಟೇ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ವರಸೆ ಬದಲಿಸುವ ಮೂಲಕ ತನ್ನ ಇಬ್ಬಗೆ ನೀತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.

ಉಗ್ರ ಮಸೂದ್ ಅಜರ್​ನನ್ನು ಬಂಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಗುರುವಾರ ಪ್ರತಿಕ್ರಿಯಿಸಿದೆ. ಹೀಗಾಗಿ ಜೈಷ್ ಪ್ರಮುಖ ಉಗ್ರ ಮಸೂದ್ ಸೆರೆ ವಿಚಾರ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಗುಪ್ತ ಸ್ಥಳದಲ್ಲಿ ಮಸೂದ್?

ಉಗ್ರ ಸಂಘಟನೆ ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್​ನನ್ನು ವಶಕ್ಕೆ ಪಡೆದಿರುವ ಪಾಕ್ ಸರ್ಕಾರ, ಗುಪ್ತ ಸ್ಥಳವೊಂದರಲ್ಲಿ ಇರಿಸಿದೆ ಎನ್ನಲಾಗುತ್ತಿದೆ. ಬಂಧನ ವಿಚಾರ ಬಹಿರಂಗಗೊಂಡಲ್ಲಿ ಮಸೂದ್​ನನ್ನು ಬಿಡಿಸಲು ಆತನ ಸಹಚರರು ಸಂಚು ರೂಪಿಸಬಹುದು ಎಂಬ ಆತಂಕದಿಂದ ಪಾಕ್ ಈ ಕ್ರಮ ಕೈಗೊಂಡಿದೆ. ಆತನನ್ನು ಮುಲ್ತಾನ್​ನಲ್ಲಿ ಇಡಲಾಗಿದ್ದು, ಇನ್ನೆರಡು ದಿನದಲ್ಲಿ ಲಾಹೋರ್​ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಇನ್ನಿತರ ಜೈಷ್ ಉಗ್ರರ ಬಂಧನಕ್ಕೆ ಪಾಕ್ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ಪಾಕ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಾತುಕತೆಗೆ ಅಲ್ಪವಿರಾಮ…

ನಿರೀಕ್ಷೆಯಂತೆ ಶುಕ್ರವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿಗಳ ಮಾತುಕತೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಪರಸ್ಪರ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಮಾತುಕತೆಯ ಮುಂದಿನ ದಿನಾಂಕವನ್ನು ಸದ್ಯದಲ್ಲೇ ನಿಗದಿ ಪಡಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. ಪಠಾಣ್​ಕೋಟ್ ದಾಳಿ ತನಿಖೆ ಆರಂಭಿಸಿರುವ ಪಾಕಿಸ್ತಾನ ಕೆಲ ಉಗ್ರರನ್ನು ಬಂಧಿಸಿ, ವಿಚಾರಣೆ ಆರಂಭಿಸಿರುವುದು ಸ್ವಾಗತಾರ್ಹ. ಪಾಕ್ ಕೈಗೊಂಡಿರುವ ತನಿಖೆಗೆ ಭಾರತ ಅಗತ್ಯ ನೆರವು ನೀಡಲಿದೆ. ಕೇಂದ್ರ ಸರ್ಕಾರ ನೀಡಿರುವ ಸಾಕ್ಷ್ಯಳನ್ನು ಒಪ್ಪಿಕೊಂಡು, ಪಠಾಣ್​ಕೋಟ್ ದಾಳಿಯ ಸೂತ್ರಧಾರರ ವಿರುದ್ಧ ಪಾಕಿಸ್ತಾನ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಭಾರತದ ಮೇಲೆ ಪ್ರತೀಕಾರ
ಪಾಕಿಸ್ತಾನ ಸರ್ಕಾರ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬೆನ್ನಲ್ಲೇ ಜೈಷ್ ಎ ಮೊಹಮ್ಮದ್ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳು ವುದಾಗಿ ಎಚ್ಚರಿಸಿದೆ. ಮಸೂದ್ ಬರೆದಿರುವ ಲೇಖನವನ್ನು ಬೇರೆ ವ್ಯಕ್ತಿಯೊಬ್ಬ ವಾಚಿಸಿರುವ ಧ್ವನಿ ಮುದ್ರಿಕೆ ಇದಾಗಿದೆ. ಜೈಷ್ ಎ ಮೊಹಮ್ಮದ್​ನ ಆನ್​ಲೈನ್ ಮುಖವಾಣಿಯಲ್ಲೂ ಈ ಲೇಖನ ಪ್ರಕಟವಾಗಿದೆ.

Write A Comment