ಮೈಸೂರು: ನಾನು ಎನಾದರೂ ಮುಂದೆ ಸಾವನ್ನಪ್ಪಿದ್ರೆ ಅದಕ್ಕೆ ನನ್ನ ಗಂಡನೇ ಕಾರಣ ಎಂದು ರಾಜೀ ಸಂಧಾನ ಮಾಡಿಸಿದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ನಾಲ್ಕು ಪುಟದ ಪತ್ರ ಬರೆದಿದ್ದ ಶಿಕ್ಷಕಿ ಕೊನೆಗೂ ತನ್ನ ಅನುಮಾನ ಪಿಶಾಚಿ ಉಪನ್ಯಾಸಕ ಗಂಡನ ಕಿರುಕುಳಕ್ಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿಚಿತ್ರ ಘಟನೆ ಮೈಸೂರಿನ ಶಾರದದೇವಿ ನಗರದಲ್ಲಿ ನಡೆದಿದೆ.
ಮೈಸೂರಿನ ಶಾರದಾದೇವಿ ನಗರದ ನಿವಾಸಿ, ಕುವೆಂಪುನಗರ ಜೂನಿಯರ್ ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕ ಟಿ.ಈಶ್ವರಪ್ಪ ಎಂಬಾತನೇ ತನ್ನ ಪತ್ನಿ, ಸರ್ಕಾರಿ ಶಾಲಾ ಶಿಕ್ಷಕಿ ಮೀನಾಕ್ಷಮ್ಮ(44) ಎಂಬುವವರ ಮೇಲೆ ಅನುಮಾನ ಪಟ್ಟು ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದ ಪತಿಯಾಗಿದ್ದಾನೆ.
ಅನುಮಾನ ಪಿಶಾಚಿ ಹೀಗೆ..
ನಾನೊಬ್ಬಳೇ ಬ್ಯಾಂಕಿಂಗ್ ಹೋದ್ರೆ ಯಾವನ್ ಹತ್ತಿರಕ್ಕೆ ಹೋಗಿದ್ದೆ, ಬಸ್ಸಿನಲ್ಲಿ ಯಾವ ಮಹಿಳೆಯ ಜೊತೆ ಕುಳಿತು ಬಂದ್ರೂ ಅವಳು ವೇಶ್ಯಾವಾಟಿಕೆ ನಡೆಸುತ್ತಾಳೆ, ನಿನ್ನನ್ನು ತಲೆ ಹಿಡಿಯುತ್ತಿದ್ದಾಳಾ? ಒಬ್ಬ ಪರಿಚಿತ ಗಂಡಸ್ಸಿನ ಜೊತೆ ಮಾತನಾಡಿದ್ರೆ.. ಏನ್ ಅವನು ನಿನನ್ನು ಇಟ್ಟುಕೊಂಡಿದ್ದಾನಾ? ಶಾಲೆಯಿಂದ ಬಸ್ಸಿನಲ್ಲಿ ಬರೋದು ಕೊಂಚ ತಡವಾದರೂ.. ಯಾವನ್ ಬಳಿಗೆ ಹೋಗಿ ಬರುತ್ತಿದ್ದೀಯ ಎಂದು ಮಾನಸಿಕವಾಗಿ, ದೈಹಿಕವಾಗಿ ಅನುಮಾನ ಪಡುತ್ತಿದ್ದ ಎಂದು ಮೀನಾಕ್ಷಮ್ಮ ತನ್ನ ಅನುಮಾನ ಪಿಶಾಚಿ ಪತಿ ಈಶ್ವರಪ್ಪ ಬಗ್ಗೆ ಪತ್ರದಲ್ಲಿ ಬರೆದಿಟ್ಟಿದ್ದಾಳೆ.
ಹೀಗೆ ಪ್ರತಿಯೊಂದಕ್ಕೂ ಅನುಮಾನ ಪಡುತ್ತಿದ್ದ ಗಂಡನ ಚಿತ್ರಹಿಂಸೆ ಸಹಿಸಲಾಗದ ಮೀನಾಕ್ಷಮ್ಮ ಹಲವು ಬಾರಿ ಠಾಣೆಯ ಮೇಟ್ಟಿಲೇರಿ ಗಂಡನ ವಿರುದ್ಧ ಪ್ರಕರಣ ದಾಖಲಿಸಿ ತವರು ಮನೆ ಸೇರಿದ್ದಳು. ಆದರೆ ಇದ್ದ ಇಬ್ಬರು 2 ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೊಲೀಸ್ ಠಾಣೆಯಲ್ಲಿ ರಾಜೀ ಸಂಧಾನದ ಮೂಲಕ ಮತ್ತೆ ಗಂಡನ ಮನೆ ಸೇರಿದ್ದಳು. ಈ ವೇಳೆ ಇಬ್ಬರಿಂದಲೂ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದ ಪೊಲೀಸರು ಒಟ್ಟಾಗಿ ಸಂಸಾರ ನಡೆಸಿಕೊಂಡು ಹೋಗುವಂತೆ ಬುದ್ಧಿವಾದ ಹೇಳಿದ್ದರು.
ಆದರೆ ನಿನ್ನೆ ಇಬ್ಬರ ನಡುವೆ ಮತ್ತೆ ಜಗಳ ನಡೆದು ಪತ್ನಿಯನ್ನು ಕೊಂದು ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಒಬ್ಬ ಉಪನ್ಯಾಸಕನಾಗಿ ಕಳೆದ 18 ವರ್ಷದಿಂದ ನಿರಂತರವಾಗಿ ಶಿಕ್ಷಕ ಪತ್ನಿಗೆ ಕಿರುಕುಳ ನೀಡಿದ ಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮೃತ ಮೀನಾಕ್ಷಮ್ಮನ ಕುಟುಂಬಸ್ಥರು, ಈ ಸಂಬಂಧ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಬೆಸ್ಟ್ ಟೀಚರ್
ಮೃತ ಮೀನಾಕ್ಷಮ್ಮ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದು, ಉತ್ತಮ ಶಿಕ್ಷಕಿ ಎಂಬ ಬಿರುದು ಸಹ ಪಡೆದಿದ್ದರು. ಅತಂಹ ಮಹಿಳೆಯೇ ಅನುಮಾನ ಪಿಶಾಚಿ ಗಂಡನ ಕೃತ್ಯಕ್ಕೆ ಬಲಿಯಾಗಿರುವುದು ಖಂಡನೀಯ ಎಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.