ಕರ್ನಾಟಕ

SSLC ಪಾಸಾದವರಿಗೆ ಎಂಜಿನಿಯರ್ ಹುದ್ದೆ : ಬಿಬಿಎಂಪಿಯಲ್ಲಿ ಮುಂಬಡ್ತಿ ಗೋಲ್‌ಮಾಲ್..!

Pinterest LinkedIn Tumblr

sslcಬೆಂಗಳೂರು, ಜ.12- ಎಸ್‌ಎಸ್‌ಎಲ್‌ಸಿ ಇಲ್ಲವೆ ಡಿಪ್ಲೊಮಾ ಮಾಡಿದವರಿಗೆ ಜವಾನನ  ಹುದ್ದೆ ಸಿಗುವುದೇ ಕಷ್ಟ. ಆದರೆ ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್‌ಎಸ್‌ಎಲ್‌ಸಿ ಪಾಸಾದವರು ಬಿಇ, ಎಂಟೆಕ್ ಮುಗಿಸಿದ ಪದವೀಧರರಿಗೆ ಮೇಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..!  ಇದು ಅಸಾಧ್ಯ ಎನ್ನುತ್ತೀರಾ… ಅಲ್ಲ, ಖಂಡಿತಾ ಸತ್ಯ. ಹೇಗೆ ಎನ್ನುವುದು ನೀವು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ… ಗ್ಯಾಂಗ್‌ಮನ್, ವರ್ಕ್ ಇನ್ಸ್‌ಪೆಕ್ಟರ್ ಆಗಿ ಸೇವೆಗೆ ನಿಯೋಜನೆಗೊಂಡ 34 ಮಂದಿ ಇದೀಗ ಬಿಬಿಎಂಪಿಯಲ್ಲಿ ಜೆಇ, ಎಇ, ಎಇಇ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕರ್ಮಕಾಂಡ ವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಬಯಲು ಮಾಡಿದ್ದಾರೆ.

ವೃಂದ ನೇಮಕಾತಿ ಮತ್ತು ಕೆಎಂಸಿ ಕಾಯ್ದೆ ಉಲ್ಲಂಘಿಸಿ ಗ್ಯಾಂಗ್‌ಮನ್, ಹೆಲ್ತ್ ಇನ್ಸ್‌ಪೆಕ್ಟರ್, ವರ್ಕ್ ಇನ್ಸ್‌ಪೆಕ್ಟರ್ ಹಾಗೂ ಜೂನಿಯರ್ ಇಂಜಿನಿಯರ್‌ಗಳಿಗೆ ಮುಂಬಡ್ತಿ ನೀಡಿ ವಂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ  ಎನ್.ಆರ್.ರಮೇಶ್ ದಾಖಲೆ ಬಿಡುಗಡೆ ಮಾಡಿದ್ದಾರೆ.

ಈ ಅವ್ಯವಹಾರದಲ್ಲಿ ಪಾಲಿಕೆ ಆಯುಕ್ತರು ನೇರವಾಗಿ ಭಾಗಿಯಾಗಿದ್ದಾರೆ ಮತ್ತು ವಿವಿಧ ಶ್ರೇಣಿಯ ಅಧಿಕಾರಿಗಳು ಪಾಲುದಾರರಾಗಿದ್ದು, ಇದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಸಹಾಯಕ ಅಭಿಯಂತರರ ಹುದ್ದೆಗೆ ಬಿ.ಇ ಕಡ್ಡಾಯ. ಆದರೆ ವರ್ಕ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು ಸಂಜೆ ಡಿಪ್ಲೊಮಾ ಪಡೆದು  ಜೂನಿಯರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಸಿ ಅಂಡ್ ಆರ್ ನಿಯಮಗಳ ಪ್ರಕಾರ ಜೆಇ ಗಳಾಗಿ 7 ವರ್ಷ ಸೇವೆ ಸಲ್ಲಿಸಿದ ನಂತರವಷ್ಟೆ ಅವರನ್ನು ಎಇಗಳಾಗಿ ಬಡ್ತಿ ನೀಡಬೇಕು. ಎಇ ಯಿಂದ ಎಇಇ ಗೆ ಮುಂಬಡ್ತಿ ಪಡೆಯಬೇಕಾದರೆ ಕನಿಷ್ಠ 9 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.

ಯಾವ ಅಧಿಕಾರಿಗೆ ಮುಂಬಡ್ತಿ ನೀಡಬೇಕು ಎಂಬುದನ್ನು ಪ್ರತಿವರ್ಷಕ್ಕೊಮ್ಮೆ ಆಯುಕ್ತರ ಆಡಳಿತ ವಿಭಾಗದ ಅಧಿಕಾರಿಗಳು ಪಟ್ಟಿ ಸಿದ್ಧಪಡಿಸಿ ಸೇವಾ ಹಿರಿತನ ಹೊಂದಿರುವವರಿಗೆ ಬಡ್ತಿ ನೀಡಬೇಕು.
ಆದರೆ ಬಿಬಿಎಂಪಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಗ್ಯಾಂಗ್‌ಮನ್‌ಗಳಿಗೂ ಮುಂಬಡ್ತಿ ನೀಡಿ ಭಾರೀ ಗೋಲ್‌ಮಾಲ್ ನಡೆಸಲಾಗಿದೆ. ಮಾತ್ರವಲ್ಲ, ಇಲ್ಲಿಯವರೆಗೂ ಜೇಷ್ಠತಾ ಪಟ್ಟಿಯನ್ನೇ ಸಿದ್ಧಪಡಿಸಿಲ್ಲದಿರುವುದು ಪಾಲಿಕೆಯಲ್ಲಿ ಮುಂಬಡ್ತಿ ಗೋಲ್‌ಮಾಲ್ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿದೆ ಎಂದು ರಮೇಶ್ ದೂರಿದರು.

ಚಾಮರಾಜಪೇಟೆಯಲ್ಲಿ ಮಾಡದೆ ಇರುವ 10 ಕೋಟಿ ರೂ.ಗಳ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ನರಸಿಂಹಯ್ಯ ಎಂಬ ವ್ಯಕ್ತಿ ಗ್ಯಾಂಗ್‌ಮನ್ ಆಗಿ ಸೇವೆಗೆ ನಿಯೋಜನೆಗೊಂಡು ಇದೀಗ ಜೆಇ ಆಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅವರು ದಾಖಲೆ ಬಿಡುಗಡೆ ಮಾಡಿದರು. ಪ್ರವೀಣ್ ಎಂಬ ವರ್ಕ್ ಇನ್ಸ್‌ಪೆಕ್ಟರ್ ಸುಂಕೇನಹಳ್ಳಿ ವಾರ್ಡ್‌ನಲ್ಲಿ ಉಸ್ತುವಾರಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿರುವುದು, ನೀಲಕಂಠಯ್ಯ ಎಂಬ ಹೆಲ್ತ್ ಇನ್ಸ್‌ಪೆಕ್ಟರ್ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಕಿಅಂಶಗಳನ್ನು ಅವರು ವಿವರಿಸಿದರು. 2010ರಲ್ಲಿ 119 ಎಇಗಳನ್ನು  ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇವರಲ್ಲಿ ಬಹುತೇಕ ಮಂದಿ ಬಿಇ, ಎಂ.ಟೆಕ್ ಪದವೀಧರರಾಗಿದ್ದಾರೆ.

ಇಂತಹ ಶಿಕ್ಷಿತ ಇಂಜಿನಿಯರ್‌ಗಳ ಮೇಲಾಧಿಕಾರಿಗಳಾಗಿ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಡಿಪ್ಲೊಮಾ ಇಲ್ಲವೆ 10ನೆ ತರಗತಿ ವ್ಯಾಸಂಗ ಮಾಡಿರುವವರು ಎಂದರೆ ಅದನ್ನು ನೀವು ನಂಬಲೇಬೇಕು.
ಪಾಲಿಕೆಯಲ್ಲಿ ನಡೆಯುತ್ತಿರುವ ಮುಂಬಡ್ತಿ ಗೋಲ್‌ಮಾಲ್‌ನಲ್ಲಿ ಹಲವಾರು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದು, ಈ ಕುರಿತಂತೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ರಮೇಶ್ ವಿವರಿಸಿದರು.

ಸತ್ತವರ ಹೆಸರಲ್ಲೂ ಸಂಬಳ:

ಬಿಬಿಎಂಪಿಯಲ್ಲಿ 383 ಸಿಬ್ಬಂದಿ ಸಾವನ್ನಪ್ಪಿದ್ದು, ಕಳೆದ 21 ವರ್ಷಗಳಿಂದಲೂ ಅವರುಗಳ ಹೆಸರಿನಲ್ಲಿ ಸಂಬಳ ಬಿಡುಗಡೆ ಮಾಡಿಕೊಳ್ಳಲಾಗುತ್ತಿದೆ ಎಂದು ರಮೇಶ್ ಇದೇ ಸಂದರ್ಭದಲ್ಲಿ ಆರೋಪಿಸಿದರು. ಈ ಅವ್ಯವಹಾರ ಕುರಿತಂತೆಯೂ ಸಮಗ್ರವಾದ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿದರು.

Write A Comment