ಕರ್ನಾಟಕ

ಕಳೆದ ಒಂದೇ ವರ್ಷದಲ್ಲಿ 964 ಅನ್ನದಾತರ ಆತ್ಮಹತ್ಯೆ..!

Pinterest LinkedIn Tumblr

raitaಕಳೆದ ವರ್ಷ ರಾಜ್ಯದಲ್ಲಿ ಸಾಲದ ಬಾಧೆ, ಬೆಳೆ ಹಾನಿ ಮತ್ತಿತರ ಕಾರಣ ಗಳಿಂದಾಗಿ 964 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ ಅತಿ ಹೆಚ್ಚು ಅಂದರೆ 107 ಮಂದಿ ಕಬ್ಬು ಬೆಳೆಗಾರರು, 112 ಮಂದಿ ಹತ್ತಿ ಬೆಳೆಗಾರರು ಸೇರಿದ್ದಾರೆ. ರಾಜ್ಯವನ್ನು ನಿರಂತರವಾಗಿ ಕಾಡುತ್ತಿರುವ ಬರ, ಬೆಲೆಕುಸಿತ, ಬೆಳೆ ಹಾನಿ, ಅತೀವೃಷ್ಟಿ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ರೈತರನ್ನು ಕಾಡುತ್ತಿವೆ.  ಹೀಗಾಗಿ ಅನ್ನ ನೀಡಬೇಕಾದ ಅನ್ನದಾತ ಆತ್ಮಹತ್ಯೆ ಮೂಲಕ ಸಾವಿಗೆ ಶರಣಾ ಗುತ್ತಿರುವುದು ನಿರಂತರವಾಗಿ ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ 316 ಪ್ರಕರಣಗಳಿಗೆ ಸರ್ಕಾರ ಪರಿಹಾರ ನೀಡಿದ್ದರೆ, 275 ಪ್ರಕರಣಗಳನ್ನು ಪರಿಹಾರ ನೀಡುವ ಸಮಿತಿ ತಿರಸ್ಕರಿಸಿದೆ.

373 ಪ್ರಕರಣಗಳು ಇನ್ನೂ ಸಮಿತಿಯಿಂದ ಪರಿಶೀಲಿನೆ ನಡೆಸಿ ಇತ್ಯರ್ಥ ಪಡಿಸಬೇಕಾಗಿದೆ. ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ರೈತರಿಗೂ ಪರಿಹಾರ ನೀಡಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರ ಸಾಕಾರಾತ್ಮಕವಾಗಿ ಸ್ಪಂದಿಸಿದ್ದರೂ ಈ ಸಂಬಂಧದ ಅಧಿಕೃತ ಆದೇಶ ಹೊರಬಿದ್ದಿಲ್ಲ.

ಆತ್ಮಹತ್ಯೆ ಮಾಡಿಕೊಂಡವರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಮಾಡಿದವರು 272 ಮಂದಿ ಇದ್ದರೆ, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ 189 ಮಂದಿ ರೈತರು ಸಾಲ ಮಾಡಿದ್ದಾರೆ. ಸಹಕಾರ ಬ್ಯಾಂಕುಗಳಿಂದ 52 ಮಂದಿ, ಸಹಕಾರ ಸಂಘಗಳಿಂದ 135 ಮಂದಿ, ಖಾಸಗಿ ಹಣಕಾಸು ಸಂಸ್ಥೆಗಳಿಂದ 46 ಮಂದಿ, ಸ್ಥಳೀಯ ವಾಗಿ 126 ಮಂದಿ ರೈತರು ಸಾಲ ಮಾಡಿದ್ದರೆ, ಸಾಲವನ್ನೇ ಮಾಡದ 87 ರೈತರಿದ್ದಾರೆ.  ಇನ್ನು 57 ಮಂದಿ ರೈತರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಕೊಳವೆ ಬಾವಿಗಳು ವಿಫಲವಾದ ಕಾರಣ 16 ರೈತರು ಮೃತಪಟ್ಟಿದ್ದಾರೆ. ಮೂವತ್ತು ವಿವಿಧ ಬೆಳೆಗಳ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 125 ಮಂದಿ ಯಾವುದೇ ಬೆಳೆ ಇಲ್ಲದೆ ಮೃತಪಟ್ಟಿದ್ದರೆ, 103 ರೈತರ ಬಗ್ಗೆ ಸೂಕ್ತ ಮಾಹಿತಿಯೇ ಸರ್ಕಾರಕ್ಕೆ ದೊರಕಿಲ್ಲ.

ಸರ್ಕಾರ ಸಂಗ್ರಹಿಸಿರುವ ಮಾಹಿತಿ ಪ್ರಕಾರ 88 ಮುಸುಕಿನ ಜೋಳ ಬೆಳೆಗಾರರು, 87 ಭತ್ತ, 54 ಮಂದಿ ರಾಗಿ ಮತ್ತು ಮಿಶ್ರ ಬೆಳೆ ರೈತರು, 23 ಮಂದಿ ತೆಂಗು ಬೆಳೆಗಾರರು, 33 ಮಂದಿ ರೇಷ್ಮೆ ಬೆಳೆಗಾರರು, 24 ಮಂದಿ ತರಕಾರಿ ಬೆಳೆಗಾರರು, 27ಮಂದಿ ತಂಬಾಕು ಬೆಳೆಗಾರರು, 13 ಮಂದಿ ಈರುಳ್ಳಿ, 27 ಶೇಂಗಾ, 44 ತೊಗರಿ, 9 ಮಂದಿ ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಳೆ ಬೆಳೆಗಾರರು 6 ಮಂದಿ, ಅಡಕೆ 14, ರಬ್ಬರ್, ಅಲಸಂದೆ ತಲಾ ಇಬ್ಬರು ರೈತರು ಮೃತಪಟ್ಟಿದ್ದರೆ, ಹೆಸರುಕಾಳು ಬೆಳೆಯುವ ರೈತರು 11 ಮಂದಿ, ಆಲೂಗಡ್ಡೆ ಹಾಗೂ ಸಜ್ಜೆ ಬೆಳೆಯುವ ರೈತರು ತಲಾ 10 ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಶುಂಠಿ, ಮಿಡಿ ಸೌತೆಕಾಯಿ, ಅವರೆ, ಮಾವು ಬೆಳೆಗಾರರು ತಲಾ ಒಬ್ಬೊಬ್ಬರು ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದು, ದ್ರಾಕ್ಷಿ ಬೆಳೆಯುವ ಐದು ಮಂದಿ, ಸೂರ್ಯ ಕಾಂತಿ ಬೆಳೆಯುವ 9 ರೈತರು, ಸೋಯಾ ಅವರೆ ಬೆಳೆಯುವ 12 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 20 ವಯಸ್ಸಿಗಿಂತ ಕಡಿಮೆ ಇದ್ದವರಲ್ಲಿ ಒಬ್ಬರಿದ್ದಾರೆ. 20ರಿಂದ 30 ವಯಸ್ಸಿನ ಅಂತರದವರಲ್ಲಿ 106 ಮಂದಿ ಇದ್ದರೆ, 31ರಿಂದ 40 ವಯೋಮಿತಿಯಲ್ಲಿ 248 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಲವತ್ತೊಂದರಿಂದ 50ರ ನಡುವಿನ ವಯಸ್ಸಿನಲ್ಲಿ ಅತಿಹೆಚ್ಚು  283 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದರೆ. 51ರಿಂದ 60 ವರ್ಷ ದೊಳಗಿನವರು 217 ಮಂದಿ ಇದ್ದರೆ, 70 ವರ್ಷದೊಳಗಿನ 88 ಮಂದಿ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. 70 ವರ್ಷ ಮೇಲ್ಪಟ್ಟವರಲ್ಲಿ 14 ಮಂದಿ ಸೇರಿದ್ದು, 7 ಮಂದಿ ರೈತರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಮಾಹಿತಿ  ಲಭ್ಯವಿದ್ದು, ಏಪ್ರಿನಲ್‌ನಲ್ಲಿ 11, ಮೇನಲ್ಲಿ 31, ಜೂನ್‌ನಲ್ಲಿ 25, ಜುಲೈನಲ್ಲಿ 208, ಆಗಸ್ಟ್‌ನಲ್ಲಿ 217, ಸೆಪ್ಟೆಂಬರ್‌ನಲ್ಲಿ 144, ಅಕ್ಟೋಬರ್‌ನಲ್ಲಿ 213, ನವೆಂಬರ್‌ನಲ್ಲಿ 86, ಡಿಸೆಂಬರ್ 28ರವರೆಗೆ 29ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಸವರ್ಷದಲ್ಲೂ ಕೂಡ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ರೈತರ ಆತ್ಮಹತ್ಯೆ ತಡೆಗೆ ಮಾಡಿದ ಯಾವುದೇ ಪ್ರಯತ್ನಗಳೂ ಫಲ ನೀಡಿಲ್ಲ.

Write A Comment