ಕರ್ನಾಟಕ

ಪ್ರೀತಿಗಾಗಿ ಹಿಂದೂ ಧರ್ಮೀಯಳಾದ ವಿದೇಶಿ!ಜರ್ಮನಿ ಹುಡುಗಿ ಹಾಸನದ ಹುಡುಗ

Pinterest LinkedIn Tumblr

marriage1ಶ್ರೀರಂಗಪಟ್ಟಣ: ಸ್ವದೇಶಿ ಯುವಕನೊಬ್ಬನನ್ನು ಪ್ರೇಮಿಸಿದ ವಿದೇಶಿ ಯುವತಿಯೊಬ್ಬಳು ಆತನ ಪೋಷಕರ ನೆರವಿನೊಂದಿಗೆ ವೀರಶೈವ ಧರ್ಮವನ್ನು ಒಪ್ಪಿ ಲಿಂಗಧಾರಣೆ ಮಾಡಿಸಿಕೊಂಡು ವಿವಾಹಕ್ಕೆ ಮುಂದಾಗಿದ್ದಾಳೆ.

ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರ್ಮನ್‌ ದೇಶದ ಬೆಯಾಟೆ ಕೋ (ಬಿಯಾ) ಎಂಬ ಯುವತಿಗೆ ಲಿಂಗಧಾರಣೆ ನೆರವೇರಿತು. ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ಮನಸೋತ ಈ ಯುವತಿ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ತಬಟಳ್ಳಿ ಗ್ರಾಮದ ಯುವಕ ಟಿ.ಕೆ. ಮದನ್‌ (ಚಂದ್ರು)ರನ್ನು ಪ್ರೀತಿಸಿ ವಿವಾಹವಾಗಲು ನಿರ್ಧರಿಸಿದ್ದಾರೆ. ಈ ಯುವ ಜೋಡಿಗಳ ವಿವಾಹ ಡಿ. 27ರಂದು ಮೈಸೂರಿನ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಜರ್ಮನಿ ಮೂಲದ ಬೆಯಾಟೆ ಕೋ ಮತ್ತು ಮದನ್‌ ಇಬ್ಬರು ದೆಹಲಿಯ ಬಯೋವರ್ಸಿಟಿ ಇಂಟರ್‌ ನ್ಯಾಷನಲ್‌ ಅಗ್ರಿ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಎಸ್ಸಿ ಅಗ್ರಿಕಲ್ಚರ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿದರು. ಇದೀಗ ಅದೇ ಇನ್‌ಸ್ಟಿಟ್ಯೂಟ್‌ನಲ್ಲಿ ಇಬ್ಬರೂ ಜ್ಯೂನಿಯರ್‌ ಸೈಂಟಿಸ್ಟ್‌ಗಳಾಗಿ ಅಧ್ಯಯನ ಮಾಡುತ್ತಿದ್ದಾರೆ.

ರೈತರ ಬಗ್ಗೆ  ಕಾಳಜಿ ಹೊಂದಿರುವ ಇಬ್ಬರೂ ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ಗುರಿ ಹೊಂದಿದ್ದಾರೆ. ಭಾರತೀಯ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಬೆಯಾಟೆ ಕೋ ಇಲ್ಲಿಯೇ ಕೃಷಿಯಲ್ಲಿ ಸಂಶೋಧನೆ ಮಾಡುವ ಅಭಿಲಾಷೆ ಹೊಂದಿದ್ದಾಳೆ. ಮದನ್‌ ಮನೋಭಾವವೂ ಅದೇ ಆಗಿದ್ದು, ಇಬ್ಬರೂ ಮದುವೆಯಾಗಿ ಮತ್ತಷ್ಟು ಕೃಷಿ ಸಂಶೋಧನೆ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ.

ಇಬ್ಬರ ಪೋಷಕರು ಮದುವೆಗೆ ಒಪ್ಪಿಗೆ ಸೂಚಿಸಿದ್ದು ಬುಧವಾರ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಯಾಟೆ ಕೋ ಅವರಿಗೆ ಹಿಂದೂ ಸಂಪ್ರದಾಯದಂತೆ ಪಂಚಾಕ್ಷರಿ ಮಂತ್ರ ಜಪ ಪಠಿಸಿ ಲಿಂಗದೀಕ್ಷೆ ತೊಡಿಸಿ ವೀರಶೈವ ಧರ್ಮಕ್ಕೆ ಲಿಂಗಧಾರಣೆ ಮಾಡಿಸಿದರು. ಯುವಕನ ಪೋಷಕರಾದ ಶಶಿಕಲಾ ಮತ್ತು ಎಸ್‌.ಕಾಂತರಾಜು ಮತ್ತು ಯುವತಿಯ ತಾಯಿ ಅಂಗಲಿಕ ಕೋ ಸೇರಿ ಮತ್ತಿತರ ಸಂಬಂಧಿಕರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
-ಉದಯವಾಣಿ

Write A Comment