ಕರ್ನಾಟಕ

ಪರಿಷತ್ ಚುನಾವಣೆ: ಕಾಂಗ್ರೆಸ್-ಬಿಜೆಪಿಗೆ ಬಂಡಾಯದ ಬಿಸಿ; ಜೆಡಿಎಸ್ ನಿರಾಳ

Pinterest LinkedIn Tumblr

cong-bjp-jds

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್, ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ಗಳಿಗೆ ತೀವ್ರ ಪ್ರತಿಷ್ಠೆಯಾಗಿರುವ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿ.27ರಂದು ನಡೆಯಲಿರುವ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ.

ಆಡಳಿತಾರೂಢ ಕಾಂಗ್ರೆಸ್ಸಿಗೆ ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ-ಉಡುಪಿ, ಬಿಜೆಪಿಗೆ ವಿಜಯಪುರ-ಬಾಗಲಕೋಟೆ ಕ್ಷೇತ್ರಗಳಲ್ಲಿ ಬಂಡಾಯ ಎದುರಾಗಿದ್ದು, ಜೆಡಿಎಸ್ ತನ್ನ ರಣತಂತ್ರದ ಮೂಲಕ ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳ ಬಂಡಾಯ ಅಭ್ಯರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ 25 ಕ್ಷೇತ್ರಗಳ ಪೈಕಿ ಕೇವಲ 20 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ, ಬೆಂಗಳೂರು ನಗರ ಹಾಗೂ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರಗಳಲ್ಲಿ ಬಂಡಾಯ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರನ್ನು ಸಂಕಷ್ಟಕ್ಕೀಡುಮಾಡಿದೆ.

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ಖಚಿತಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ವಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಹಾಲಿ ಸದಸ್ಯ ದಯಾನಂದ ರೆಡ್ಡಿ ಬದಲು ಎಂ.ನಾರಾಯಣ ಸ್ವಾಮಿಗೆ ಟಿಕೆಟ್ ನೀಡಲಾಯಿತು.

ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯ ವಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಹಾಲಿ ಸದಸ್ಯ ದಯಾನಂದ ರೆಡ್ಡಿ ಬದಲು ಎಂ.ನಾರಾಯಣ ಸ್ವಾಮಿಗೆ ಟಿಕೆಟ್ ನೀಡಲಾಯಿತು.

ಕೋಲಾರ ಕ್ಷೇತ್ರದ ಹಾಲಿ ಸದಸ್ಯ ನಸೀರ್ ಅಹ್ಮದ್ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ ಪರಿಣಾಮವಾಗಿ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಸಂಸದ ವೀರಪ್ಪಮೊಯ್ಲಿ ತಮ್ಮ ಬೆಂಬಲಿಗರ ಪರವಾಗಿ ಪ್ರಬಲ ಲಾಬಿ ನಡೆಸಿದರು. ಆದರೆ, ಅಂತಿಮವಾಗಿ ಕೆ.ಎಚ್.ಮುನಿಯಪ್ಪ ಕೈ ಮೇಲಾಯಿತು.

ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಹಾಲಿ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿ, ಕರಪತ್ರಗಳನ್ನು ಮುದ್ರಿಸಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

ಆದರೆ, ಅಂತಿಮವಾಗಿ ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರ ಮಧ್ಯಪ್ರವೇಶದಿಂದಾಗಿ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಕೈ ತಪ್ಪಿದ್ದು, ಪ್ರತಾಪ್‌ಚಂದ್ರ ಶೆಟ್ಟಿಯನ್ನು ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿಸಿರುವುದು ಬಂಡಾಯದ ಕಾವು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಮುಖ್ಯಮಂತ್ರಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನವೊಲಿಕೆ ಯತ್ನದ ಹೊರತಾಗಿಯೂ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ದಯಾನಂದ ರೆಡ್ಡಿ ಚುನಾವಣಾ ಕಣದಿಂದ ಹಿಂದೆ ಸರಿಯಲು ಸಿದ್ಧರಿಲ್ಲ. ಅದೇ ರೀತಿ ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದ ಬಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಮ್ಮ ಪಟ್ಟನ್ನು ಸಡಿಲಿಸಲಿಲ್ಲ.

ಮಂಡ್ಯ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಲ್.ಆರ್. ಶಿವರಾಮೇಗೌಡರನ್ನು ಕಣಕ್ಕಿಳಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಸ್ಥಳೀಯ ಮುಖಂಡರು ಬಂಡಾಯದ ಬಾವುಟ ಹಾರಿಸಿದ್ದರು. ಆದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

ವಿಜಯಪುರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಸನಗೌಡ ಪಾಟೀಲ್ ಯತ್ನಾಳ್, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವುದರಿಂದ ಪಕ್ಷದ ಹಿರಿಯ ನಾಯಕರ ಮನವೊಲಿಕೆ ಯತ್ನ ವಿಫಲವಾಗಿದೆ.

ಆರಂಭದಲ್ಲಿ ಬಂಡಾಯವನ್ನು ಎದುರಿಸಿದ್ದ ಜೆಡಿಎಸ್ ಮಾತ್ರ ತನ್ನ ಚಾಣಾಕ್ಷ ನಡೆಯಿಂದ ಮಂಡ್ಯದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿ.ರಾಮಕೃಷ್ಣ ಹಾಗೂ ಕೋಲಾರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ವೈ. ನಂಜೇಗೌಡರಿಂದ ನಾಮಪತ್ರಗಳನ್ನು ವಾಪಸ್ ಪಡೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Write A Comment