
ಮೈಸೂರು, ಡಿ.12: ವಿದ್ಯುತ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸಲು ಇಂಧನ ಸಚಿವರಾದ ಡಿ. ಕೆ. ಶಿವಕುಮಾರ್ ವಿಫಲರಾಗಿರುವುದರಿಂದ ಕೂಡಲೇ ನ್ಯಾಯಾಂಗ ತನಿಖೆ ನಡೆಸುವಂತೆ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿ ಹಾಲಿ 3500 ಮೆ ವಾ ವಿದ್ಯುತ್ ಕೊರತೆ ಇದೆ. ಕಾಂಗ್ರೇಸ್ ಸರ್ಕಾರವು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಕ್ರಮಕೈಗೊಂಡಿಲ್ಲ ಹಾಗೂ ರಾಯಚೂರು ಮತ್ತು ಬಳ್ಳಾರಿಗಳಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿನ ಹಳೆಯ ಯಂತ್ರಗಳನ್ನು ದುರಸ್ತಿಗೊಳಿಸಲು ಮುಂದಾಗಿಲ್ಲ. ಇದರಿಂದಾಗಿ ರಾಜ್ಯವು ವಿದ್ಯುತ್ ಕೊರತೆಯನ್ನು ಎದುರಿಸುವಂತಾಗಿದೆ. ಈ ಕೊರತೆಯನ್ನು ನಿವಾರಿಸಲು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವುದರೊಂದಿಗೆ ಮತ್ತು ರಾಜ್ಯದಲ್ಲಿ ಖಾಸಗಿಯವರು ಉತ್ಪಾದಿಸುವ ವಿದ್ಯುತ್‌ನ್ನು ಖರೀದಿಸಿ ಅದನ್ನು ನಮ್ಮಲ್ಲಿಯೇ ಬಳಸಿಕೊಂಡಲ್ಲಿ ಈಗ ಇರುವ ವಿದ್ಯುತ್ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಡುವೆ ಪರಸ್ಪರ ಹೊಂದಾಣಿಕೆ ಕೊರತೆಯಿಂದ ಜನರು ಸಂಕಷ್ಟ ಎದುರಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರ ರಾಜ್ಯಕ್ಕೆ ವಿದ್ಯುತ್ ಕೊರತೆಯನ್ನು ಬಳುವಳಿಯನ್ನಾಗಿ ನೀಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಹಾಸ್ಯಾಸ್ಪದ. ಆದರೆ ಈ ಬಳುವಳಿ ಕಾಂಗ್ರೇಸಿನದ್ದೇ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ವಿದ್ಯುತ್ ಉತ್ಪಾದನೆಗೆ ಅವಶ್ಯವಿರುವ ಕಲ್ಲಿದ್ದಲನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದರೂ ಅದನ್ನು ತರಿಸಿಕೊಳ್ಳಲು ಕಾಂಗ್ರೇಸ್ ಸರ್ಕಾರ ಉದಾಸೀನ ಮನೋಭಾವ ತೋರುತ್ತಿದೆ. ಇನ್ನು ಮುಂದಾದರೂ ಈ ಉದಾಸೀನ ಮನೋಭಾವ ಬಿಟ್ಟು ಕೇಂದ್ರ ಸರ್ಕಾರ ನೀಡಿರುವ ಕಲ್ಲಿದ್ದಲನ್ನು ರಾಯಚೂರು ಮತ್ತು ಬಳ್ಳಾರಿ ವಿದ್ಯುತ್ ಉತ್ಪಾದನ ಘಟಕಗಳಿಗೆ ತರಿಸಿಕೊಂಡು ವಿದ್ಯುತ್ ಉತ್ಪಾದನೆಗೆ ಮುಂದಾದಲ್ಲಿ ಈಗ ಇರುವ ವಿದ್ಯುತ್ ಕೊರತೆಯನ್ನು ಬಗೆಹರಿಸಬಹುದಾಗಿದೆ. ಈಶ್ವರಪ್ಪ ಹೇಳಿದರು.
ನಿನ್ನೆ ನಗರದಲ್ಲಿ ಪರಿಚಯಿಸಲಾದ ಹೊಸಬೆಳಕು ಯೋಜನೆಯು ಕಾಂಗ್ರೇಸ್ ಸರ್ಕಾರದ ಯೋಜನೆಯಲ್ಲ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಎಲ್. ಇ. ಡಿ ಬಲ್ಪ್ ಗಳನ್ನು ಬಳಸುವುದರಿಂದ ಪ್ರತಿ ಮಾಹೆ 450 ಕೋಟಿ ರೂಗಳ ಉಳಿತಾಯವಾಗಲಿದೆ ಎಂದು ಮುಖ್ಯಮಂತ್ರಿಯವರು ಹೇಳುತ್ತಿದ್ದಾರೆ. ಹೀಗೆ ಉಳಿತಾಯವಾಗುವ ಹಣದಿಂದ ಎಲ್.ಇ.ಡಿ ಬಲ್ಪ್ ಗಳನ್ನು ಖರೀದಿಸಿ ಅವುಗಳನ್ನು ಪ.ಜಾತಿ, ಪ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಜನಾಂಗದವರಿಗೆ ಉಚಿತವಾಗಿ ನೀಡಲಿ ಇಲ್ಲವಾದಲ್ಲಿ ಶೇ 50 ರಷ್ಟು ರಿಯಾಯಿತಿ ದರದಲ್ಲಿ ಅವುಗಳನ್ನು ಒದಗಿಸಲು ಮುಖ್ಯಮಂತ್ರಿಗಳು ಮುಂದಾಗುವಂತೆ ಈಶ್ವರಪ್ಪ ಆಗ್ರಹಿಸಿದರು.
ಮುಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು 20 ಸ್ಥಾನಗಳನ್ನು ಗಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಅದು ಒಂದೆಡೆ ಇರಲಿ. ಕಾಂಗ್ರೇಸ್ ಪಕ್ಷವು 20 ಸ್ಥಾನಗಳಿಸುವುದಿರಲಿ 15 ಸ್ಥಾನಗಳನ್ನು ಗಳಿಸುವುದಿಲ್ಲ. ಒಂದು ವೇಳೆ 15 ಸ್ಥಾನಗಳನ್ನು ಕಾಂಗ್ರೇಸ್ ಪಕ್ಷವು ಗಳಿಸಿದ್ದೇ ಆದಲ್ಲಿ ನಾನು ಸಹ ಸಂತಸಪಡುತ್ತೇನೆ ಎಂದು ಹೇಳಿದ ಈಶ್ವರಪ್ಪ ಇಷ್ಟು ಸ್ಥಾನಗಳನ್ನು ಗಳಿಸುವುದು ಬಿಜೆಪಿ ಪಕ್ಷದಿಂದ ಮಾತ್ರ ಸಾದ್ಯ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನಪರಿಷತ್ ಅಭ್ಯರ್ಥಿ ಆರ್ ರವಿ, ಮಾಜಿ ಸಚಿವ ಎಂ ಶಿವಣ್ಣ, ಸಿ.ಹೆಚ್ ವಿಜಯ್ ಶಂಕರ್, ಇ ಮಾರುತಿರಾವ್ ಪವಾರ್ ಸೇರಿದಂತೆ ಇನ್ನಿತರ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.