
ಬೆಂಗಳೂರು: ಸಿರಿಯಾ ಮತ್ತು ಇರಾಕ್ ನಲ್ಲಿ ಅಟ್ಟಹಾಸಗೈಯುತ್ತಿರುವ ಐಸಿಸ್ ಉಗ್ರರ ಕೃತ್ಯವನ್ನು ಖಂಡಿಸುತ್ತೇವೆ. ಐಸಿಸ್ ಉಗ್ರರು ನಿಜವಾದ ಮುಸ್ಲಿಮರೇ ಅಲ್ಲ. ಹಾಗಾಗಿ ಐಸಿಸ್ ಉಗ್ರರ ವಿರುದ್ಧ ಫತ್ವಾ ಹೊರಡಿಸಲಾಗುವುದು, ಅಷ್ಟೇ ಅಲ್ಲ ಈ ಬಗ್ಗೆ ರಾಷ್ಟ್ರಪತಿಗಳಿಗೂ ಮನವಿ ಮಾಡುತ್ತೇವೆ ಎಂದು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಕಾರ್ಯದರ್ಶಿ ಅನ್ವರ್ ಷರೀಫ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಸ್ಲಾಂ ಹೆಸರಿನಲ್ಲಿನ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಐಸಿಸ್ ಭಯೋತ್ಪಾದಕರ ರಕ್ತಪಾತ ಇಸ್ಲಾಂಗೆ ವಿರುದ್ಧವಾದದ್ದು. ಅಲ್ಲಾ ಹಿಂಸೆಯನ್ನು ಒಪ್ಪುವುದಿಲ್ಲ. ಹಾಗಾಗಿ ಐಸಿಸ್ ವಿರುದ್ಧ ಫತ್ವಾ ಹೊರಡಿಸಲು ಸುಮಾರು 70 ಸಾವಿರ ಮೌಲ್ವಿಗಳು, ಇಮಾಮ್ ಗಳು ಸಹಿ ಹಾಕಿರುವುದಾಗಿ ಈ ಸಂದರ್ಭದಲ್ಲಿ ಅನ್ವರ್ ಹೇಳಿದರು.
ಕಾರಣವಿಲ್ಲದೇ ಕೊಲ್ಲುವವರನ್ನು ಅಲ್ಲಾ ಒಪ್ಪೋದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಮದರಸಾ ಶಾಲೆ ಸೇರಿದಂತೆ ಎಲ್ಲೆಡೆ ಉಗ್ರರ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
-ಉದಯವಾಣಿ